ಗುರುಗ್ರಾಮ: ಸೈಬರ್ ಸಿಟಿ ಎಂದೇ ಗುರುತಿಸಲ್ಪಟ್ಟಿರುವ ಗುರುಗ್ರಾಮದಲ್ಲಿ ಲಿವ್-ಇನ್ ಸಂಬಂಧವೊಂದು ಅತ್ಯಂತ ಭೀಕರ ತಿರುವು ಪಡೆದುಕೊಂಡಿದ್ದು, 19 ವರ್ಷದ ಯುವತಿಯೊಬ್ಬಳು ತನ್ನ ಸಂಗಾತಿಯಿಂದಲೇ ಅತೀವ ಕ್ರೌರ್ಯಕ್ಕೆ ಒಳಗಾದ ಘಟನೆ ನಡೆದಿದೆ. ತ್ರಿಪುರ ಮೂಲದ ಬಯೋಟೆಕ್ನಾಲಜಿ ವಿದ್ಯಾರ್ಥಿನಿಯ ಮೇಲೆ ಆಕೆಯ ಲಿವ್-ಇನ್ ಸಂಗಾತಿ ಶಿವಂ ಎಂಬಾತ ಸತತ 3 ದಿನಗಳ ಕಾಲ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಯುವತಿಯ ಖಾಸಗಿ ಭಾಗಕ್ಕೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿದ್ದಲ್ಲದೆ, ಚಾಕು ಮತ್ತು ಸ್ಟೀಲ್ ಬಾಟಲಿಗಳಿಂದ ಹಲ್ಲೆ ನಡೆಸಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಪ್ರಸ್ತುತ ಯುವತಿಯ ಸ್ಥಿತಿ ಗಂಭೀರವಾಗಿದ್ದು, ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯ
ಬಂಧಿತ ಆರೋಪಿ ಶಿವಂ ಮತ್ತು ಸಂತ್ರಸ್ತ ಯುವತಿ 2025ರ ಸೆಪ್ಟೆಂಬರ್‌ನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರು. ಮದುವೆಯಾಗುವ ನಿರ್ಧಾರ ಕೈಗೊಂಡಿದ್ದ ಅವರು ಗುರುಗ್ರಾಮದ ಸೆಕ್ಟರ್ 69ರ ಪೇಯಿಂಗ್ ಗೆಸ್ಟ್ (PG)ಯಲ್ಲಿ ಒಟ್ಟಿಗೆ ವಾಸವಿದ್ದರು. ಆದರೆ, ಕಳೆದ ಕೆಲವು ದಿನಗಳಿಂದ ಯುವತಿಯ ನಡತೆಯ ಮೇಲೆ ಸಂಶಯ ಪಡತೊಡಗಿದ್ದ ಶಿವಂ, ಫೆ.16ರಿಂದ ಆಕೆಯನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡಲಾರಂಭಿಸಿದ್ದ. ಮದುವೆಯ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ಹೋಗಿ, ಆರೋಪಿಯು ಯುವತಿಯ ತಲೆಯನ್ನು ಗೋಡೆಗೆ ಚಚ್ಚಿ, ಚಾಕುವಿನಿಂದ ಕಾಲಿನ ಭಾಗಕ್ಕೆ ಗಾಯಗೊಳಿಸಿದ್ದಾನೆ. ಆಕೆಯ ಖಾಸಗಿ ಅಂಗಕ್ಕೆ ಸ್ಯಾನಿಟೈಸರ್ ಸುರಿದು, ಬೆಂಕಿ ಹಚ್ಚಿದ್ದಾನೆ. ಅಷ್ಟೇ ಅಲ್ಲದೆ, ನಗ್ನ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾಗಿಯೂ ಸಂತ್ರಸ್ತೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾಳೆ.
ಆ ಒಂದು ಫೋನ್ ಕಾಲ್ ಜೀವ ಉಳಿಸಿತು
ಸತತ ಮೂರು ದಿನಗಳ ನರಕಯಾತನೆಯ ನಂತರ, ಫೆ.18ರಂದು ಯುವತಿ ಹೇಗೋ ಆರೋಪಿಯ ಫೋನ್‌ನಿಂದ ತನ್ನ ತಾಯಿಗೆ ಕರೆ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ. ತಾಯಿ ಪೊಲೀಸ್ ಅಧಿಕಾರಿಯಾಗಿದ್ದರಿಂದ, ಆರೋಪಿಗೆ ಅರ್ಥವಾಗದಂತೆ ಬಂಗಾಳಿ ಭಾಷೆಯಲ್ಲಿ ತನ್ನ ಪರಿಸ್ಥಿತಿಯನ್ನು ವಿವರಿಸಿದ್ದಾಳೆ. “ನಾನು ಜೀವಂತವಾಗಿ ಬೇಕೆಂದರೆ ತಕ್ಷಣ ಬಂದು ನನ್ನನ್ನು ಉಳಿಸಿ” ಎಂದು ಆಕೆ ಅಳುತ್ತಾ ಬೇಡಿಕೊಂಡಿದ್ದಳು. ತಕ್ಷಣವೇ ಎಚ್ಚೆತ್ತ ತಾಯಿ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಗುರುಗ್ರಾಮ ಪೊಲೀಸರು ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಗುರುಗ್ರಾಮ ಪೊಲೀಸರು ಆರೋಪಿ ಶಿವಂನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯ ವಿರುದ್ಧ ಅಕ್ರಮ ಬಂಧನ, ಉದ್ದೇಶಪೂರ್ವಕ ಹಲ್ಲೆ ಮತ್ತು ವಂಚನೆಯಿಂದ ದೈಹಿಕ ಸಂಬಂಧ ಬೆಳೆಸಿದ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಸಂತ್ರಸ್ತೆಯ ತಾಯಿ ಮತ್ತು ಕಾನೂನು ತಜ್ಞರು ಈ ಪ್ರಕರಣದಲ್ಲಿ ಕೊಲೆ ಯತ್ನ ಮತ್ತು ಅತ್ಯಾಚಾರದಂತಹ ಕಠಿಣ ಸೆಕ್ಷನ್‌ಗಳನ್ನು ಸೇರಿಸಬೇಕೆಂದು ಒತ್ತಾಯಿಸಿದ್ದಾರೆ. ಸದ್ಯ ವೈದ್ಯಕೀಯ ವರದಿಗಾಗಿ ಕಾಯುತ್ತಿರುವ ಪೊಲೀಸರು, ಅದರ ಆಧಾರದ ಮೇಲೆ ಹೆಚ್ಚಿನ ಸೆಕ್ಷನ್‌ಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ನೋ ಪಾರ್ಕಿಂಗ್ ಸ್ಥಳಗಳಲ್ಲಿ ವೆಹಿಕಲ್ ಪಾರ್ಕಿಂಗ್ | ಸರ್ಕಾರಿ ವಾಹನಕ್ಕೂ ಬಿತ್ತು ಫೈನ್



















