ಬೆಂಗಳೂರು: ಕನ್ನಡಿಗರೇ ಆದ ಎನ್.ಆರ್.ನಾರಾಯಣಮೂರ್ತಿ, ನಂದನ್ ನಿಲೇಕಣಿ ಸೇರಿ ಹಲವರು ಕಟ್ಟಿದ ಇನ್ಫೋಸಿಸ್ ಈಗ ವಿಶ್ವದ ಪ್ರಮುಖ ಟೆಕ್ ಕಂಪನಿಗಳಲ್ಲಿ ಒಂದಾಗಿದೆ. ಕನ್ನಡಿಗರು ಸೇರಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ. ಇಂತಹ ಇನ್ಫೋಸಿಸ್ ಕಂಪನಿಯು ಸಾಮಾಜಿಕ ಕಾರ್ಯಗಳಿಗಾಗಿ ಇನ್ಫೋಸಿಸ್ ಪ್ರತಿಷ್ಠಾನ ಆರಂಭಿಸಿದೆ. ಇದರಿಂದ ಹಲವು ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ನಾಡಿನ ತಾಯಿ ಹಾಗೂ ಮಕ್ಕಳ ಆರೋಗ್ಯಕ್ಕಾಗಿ 48 ಕೋಟಿ ರೂ. ಅನುದಾನ ನೀಡುವುದಾಗಿ ಘೋಷಣೆ ಮಾಡಿದೆ.
ಹೌದು, ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಸುಧಾರಣೆಗಾಗಿ 48 ಕೋಟಿ ರೂ. ಅನುದಾನ ನೀಡುವುದಾಗಿ ಇನ್ಫೋಸಿಸ್ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್)ಯ ಅಂಗವಾದ ಇನ್ಫೋಸಿಸ್ ಪ್ರತಿಷ್ಠಾನ ಮಾಹಿತಿ ನೀಡಿದೆ.
ಇನ್ಫೋಸಿಸ್ ಪ್ರತಿಷ್ಠಾನದ ಸಮಾಜಮುಖಿ ಕೆಲಸದಿಂದಾಗಿ ರಾಜ್ಯದ ಸಾವಿರಾರು ಮಕ್ಕಳು ಹಾಗೂ ಮಹಿಳೆಯರಿಗೆ ಅನುಕೂಲವಾಗಲಿದೆ. ಇದಕ್ಕಾಗಿ ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಜತೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ. ಈ ಸಂಸ್ಥೆಗೆ ಸತ್ಯಸಾಯಿ ಸರಳಾ ಸ್ಮರಣಾರ್ಥ ಆಸ್ಪತ್ರೆಗೆ ನೆರವು ನೀಡಲಿದೆ.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅವಕಾಶ ವಂಚಿತ ತಾಯಂದಿರು ಮತ್ತು ಮಕ್ಕಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವ ಗುರಿ ಹೊಂದಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ. ನೀಡಲಾಗುವ ಅನುದಾನದಲ್ಲಿ ಒಂದು ಭಾಗವು ಶಸ್ತ್ರ ಚಿಕಿತ್ಸೆಯ ವೆಚ್ಚಗಳನ್ನು ಒಳಗೊಂಡಿದೆ. ವಾರ್ಷಿಕ 8 ಸಾವಿರಕ್ಕೂ ಹೆಚ್ಚು ಜನ ಇದರ ಲಾಭ ಪಡೆದುಕೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದೆ. ಸ್ನಾತಕೋತ್ತರ, ಸ್ನಾತಕಪೂರ್ವ ವೈದ್ಯಕೀಯ ವಿದ್ಯಾರ್ಥಿಗಳಿಗೆ, ನರ್ಸ್ ಗಳಿಗೆ ತರಬೇತಿ ನೀಡಲು ಕೂಡ ಹಣ ಬಳಸಲಾಗುತ್ತದೆ ಎಂದು ಪ್ರತಿಷ್ಠಾನ ತಿಳಿಸಿದೆ.



















