ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಕಾಟ ಮಿತಿ ಮೀರುತ್ತಿದೆ. ಮೊನ್ನೆ ಅಷ್ಟೇ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರ ಫೋನ್ ಅನ್ನು ಹ್ಯಾಕ್ ಮಾಡಿದ್ದರು. ಇದೀಗ ಇನ್ಫೋಸಿಸ್ ಮುಖ್ಯಸ್ಥೆ ಹಾಗೂ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಅವರಿಗೂ ಸಹ ಸೈಬರ್ ವಂಚನೆಗೆ ಯತ್ನಿಸಿದ್ದಾರೆ.
ಸೆಪ್ಟೆಂಬರ್ 5ರಂದು ಸುಧಾಮೂರ್ತಿ ಅವರಿಗೆ ದೂರ ಸಂಪರ್ಕ ಸಚಿವಾಲಯದ ಉದ್ಯೋಗಿ ಅಂತೇಳಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ನಿಮ್ಮ ಮೊಬೈಲ್ ನಂಬರ್ ಅನ್ನು ಆಧಾರ್‌ಗೆ ಲಿಂಕ್ ಮಾಡದೆ ನೋಂದಾಯಿಸಲಾಗಿದೆ. ಹಾಗಾಗಿ ವ್ಯೆಯಕ್ತಿಕ ಮಾಹಿತಿ ನೀಡಿ ಎಂದು ಮಾಹಿತಿ ಕೇಳಿದ್ದಾನೆ. ಅಷ್ಟೆ ಅಲ್ಲದೇ ನಿಮ್ಮ ನಂಬರ್‌ನಿಂದ ಅಶ್ಲೀಲ ವೀಡಿಯೋ ಕಳಿಸಲಾಗುತ್ತಿದೆ. ಅದನ್ನ ನಾನು ನಿಲ್ಲಿಸಿದ್ದೇನೆ ಎಂದೆಲ್ಲ ಹೇಳಿದ್ದಾನೆ. ಈ ಬಗ್ಗೆ ಅನುಮಾನಗೊಂಡ ಸುಧಾಮೂರ್ತಿ ಅವರು, ಕರೆ ಬಂದಿದ್ದ ನಂಬರ್ ಅನ್ನು ಟ್ರೂಕಾಲರ್ ಮೂಲಕ ಪರಿಶೀಲಿಸಿದ್ದಾರೆ. ಟ್ರೂಕಾಲರ್‌ನಲ್ಲಿ ಟೆಲಿಕಾಂ ಡೆಡಿಪಾರ್ಟ್‌ಮೆಂಟ್ ಎಂದು ಬಂದಿದೆ. ಇದರಿಂದ ಕೂಡಲೇ ಎಚ್ಚೆತ್ತುಕೊಂಡ ಸುಧಾಮೂರ್ತಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ವಂಚಕನ ವಿರುದ್ಧ ದೂರು ನೀಡಿದ್ದಾರೆ.
ಈ ಸಂಬಂಧ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.