ಉಡುಪಿ: ಜಿಲ್ಲೆಯಲ್ಲಿರುವ ಐತಿಹಾಸಿಕ ತಾಣಗಳಲ್ಲಿ ಅಲ್ಲಿನ ಮಾಹಿತಿಯನ್ನು ಕನ್ನಡ ಭಾಷೆಯಲ್ಲಿ ಅಳವಡಿಸಬೇಕು. ಪ್ರವಾಸಿ ತಾಣಗಳಲ್ಲೂ ಕನ್ನಡ ನಾಮಫಲಕ ಪ್ರದರ್ಶಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದ ಬಿಳಿಮಲೆ, ಮಲ್ಪೆ ಬೀಚ್‌ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಶಸ್ತ್ಯ ದೊರೆತಿದ್ದರೂ ಅಲ್ಲಿನ ನಾಮಫಲಕಗಳು ಕನ್ನಡ ಭಾಷೆಯಲ್ಲಿಲ್ಲ. ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಗಮನಹರಿಸಿ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕ ಅಳವಡಿಸಲು ಕ್ರಮ ವಹಿಸಬೇಕೆಂದಿದ್ದಾರೆ.
ಆಡಳಿತದಲ್ಲಿ ಕನ್ನಡ ಭಾಷೆ ಶೇ. 100ರಷ್ಟು ಅನುಷ್ಠಾನವಾಗಬೇಕು. ಕನ್ನಡ ಭಾಷೆಯ ಬಳಕೆ ನಿರಂತರವಾಗಿರಲು ಒತ್ತು ನೀಡಬೇಕು. ಈಗಾಗಲೇ ಸರ್ಕಾರದ ಕಾರ್ಯದರ್ಶಿಗಳೂ ಆಡಳಿತ ಕನ್ನಡದಲ್ಲೇ ಇರಬೇಕು ಎಂದು ಆದೇಶ ಹೊರಡಿಸಿದ್ದಾರೆ. ಭಾಷೆ ಉಳಿವಿಗಾಗಿ ಹೆಚ್ಚು ಸಂವೇದನಾಶೀಲತೆಯಿಂದ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.
ಕನ್ನಡ ಪರ ಹೋರಾಟ ನಡೆಸಿದ ಕನ್ನಡ ಪರ ಸಂಘಟನೆಗಳ ಸದಸ್ಯರ ಮೇಲೆ ಹಾಕಿರುವ ಪ್ರಕರಣಗಳನ್ನು ವಾಪಸ್ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು. ಶಿಕ್ಷಣ, ಉದ್ಯೋಗಕ್ಕಾಗಿ ಬಂದ ಹೊರರಾಜ್ಯದ ಕನ್ನಡೇತರರು ಕನ್ನಡ ಕಲಿಯಲು ಉತ್ಸುಕರಾಗಿದ್ದರೆ ಕನ್ನಡ ಪ್ರಾಧಿಕಾರದ ವತಿಯಿಂದ ಕಲಿಕಾ ಕೇಂದ್ರಗಳನ್ನು ತೆರೆದು ಕನ್ನಡವನ್ನು ಕಲಿಸಲಾಗುವುದು ಎಂದು ಕೂಡ ಅವರು ಹೇಳಿದ್ದಾರೆ.
ಜಿಲ್ಲೆಯಲ್ಲಿರುವ ವಾಣಿಜ್ಯ ಕೇಂದ್ರಗಳು ಹಾಗೂ ಕೈಗಾರಿಕಾ ಕೇಂದ್ರಗಳ ಮುಂಭಾಗದ ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಭಾಷೆಯಲ್ಲಿ ಹಾಗೂ ಶೇ. 40ರಷ್ಟು ಇತರ ಭಾಷೆಯಲ್ಲಿ ಅಳವಡಿಸಲು ಕ್ರಮವಹಿಸಬೇಕು. ಕೆಲವು ಪ್ರಾಥಮಿಕ ಶಾಲಾ ಮಕ್ಕಳು ಕನ್ನಡ ಭಾಷೆಯ ಅಕ್ಷರಗಳನ್ನು ಗುರುತಿಸುವ ಪರಿಸ್ಥಿತಿಯಲ್ಲಿ ಇಲ್ಲ. ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ನೀಡುವಂತಾಗಬೇಕು. ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ಹೆಚ್ಚಿನವರು ಉತ್ತೀರ್ಣರಾಗಿದ್ದಾರೆ. ಆದರೆ, ಕೆಲವು ವಿದ್ಯಾರ್ಥಿಗಳು ತಮ್ಮ ಮಾತೃಭಾಷೆ ಕನ್ನಡವಾಗಿದ್ದರೂ ಅನುತ್ತೀರ್ಣರಾಗಿದ್ದಾರೆ. ಅದಕ್ಕೆ ಕಾರಣವನ್ನು ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಇನ್ನು, ಆಸ್ಪತ್ರೆಗಳಲ್ಲಿ ಮರಣೋತ್ತರ ಪರೀಕ್ಷೆಯ ವರದಿಗಳು ಅದಷ್ಟು ಕನ್ನಡದಲ್ಲಿಯೇ ಇರುವ ಹಾಗೆ ಕ್ರಮವಹಿಸಬೇಕು. ಕಡ್ಡಾಯವಾಗಿ ರೋಗಿಗಳ ಹೆಸರನ್ನು ಕನ್ನಡದಲ್ಲಿಯೇ ನಮೂದು ಮಾಡಬೇಕು. ವೈದ್ಯರೂ ಕನ್ನಡ ಭಾಷಾಭಿಮಾನವನ್ನು ಬೆಳೆಸಿಕೊಳ್ಳುಬೇಕು ಎಂದಿದ್ದಾರೆ.
ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಸ್ಥಳೀಯ ಭಾಷೆಯನ್ನು ಮಾತನಾಡುವವರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದು ಉತ್ತಮ. ಇದರಿಂದ ಸ್ಥಳೀಯ ಜನರು ದೈನಂದಿನ ಬ್ಯಾಂಕಿಂಗ್ ವ್ಯವಹಾರಗಳನ್ನು ಸರಳವಾಗಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಈ ಬಗ್ಗೆ ಲೀಡ್ ಬ್ಯಾಂಕ್ ಸಭೆ ನಡೆಸಿ, ಇತರ ಬ್ಯಾಂಕ್‌ಗಳಿಗೆ ಸೂಚನೆ ನೀಡಬೇಕು ಎಂದಿದ್ದಾರೆ.



















