ಇಂದೋರ್: ಪ್ರಿಯಕರನೊಂದಿಗೆ ಮದುವೆಯಾಗುವ ಇಚ್ಛೆಯಿಂದ ಮನೆಯಿಂದ ಓಡಿಹೋಗಿದ್ದ ಯುವತಿಯೊಬ್ಬಳು, ಒಂದು ವಾರದ ನಂತರ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿ ವಾಪಸ್ ಬಂದಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. 18 ವರ್ಷಗಳ ಹಿಂದೆ ತೆರೆಕಂಡಿದ್ದ ‘ಜಬ್ ವಿ ಮೆಟ್’ ಚಿತ್ರದ ಕಥೆಯನ್ನು ಹೋಲುವ ಈ ಘಟನೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿನಿ ಶ್ರದ್ಧಾ ತಿವಾರಿ, ತನ್ನ ಪ್ರಿಯಕರ ಸಾರ್ಥಕ್‌ನೊಂದಿಗೆ ಓಡಿಹೋಗಲು ಯೋಜಿಸಿದ್ದಳು. ಆದರೆ, ನಿಗದಿತ ಸಮಯಕ್ಕೆ ಆತ ರೈಲ್ವೆ ನಿಲ್ದಾಣಕ್ಕೆ ಬಾರದಿದ್ದಾಗ, ಆಕೆ ರತ್ಲಾಮ್‌ಗೆ ಹೋಗುವ ರೈಲು ಹತ್ತಿದ್ದಾಳೆ.
ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ, ಅದೇ ರೈಲಿನಲ್ಲಿ ಆಕೆಗೆ ತನ್ನ ಇನ್ನೊಬ್ಬ ಪ್ರೇಮಿ, ಇಂದೋರ್ ಮೂಲದ ಎಲೆಕ್ಟ್ರಿಷಿಯನ್ ಕರಣ್‌ದೀಪ್ ಅನಿರೀಕ್ಷಿತವಾಗಿ ಸಿಕ್ಕಿದ್ದಾನೆ. ಪ್ರಯಾಣದ ಸಮಯದಲ್ಲಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಬಳಿಕ ಮಂದಸೌರ್‌ನಲ್ಲಿ ಇಳಿದು, ಅಲ್ಲಿಂದ ಸುಮಾರು 250 ಕಿ.ಮೀ. ದೂರದಲ್ಲಿರುವ ಮಹೇಶ್ವರಕ್ಕೆ ತೆರಳಿ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ. ನಂತರ, ಇಂದೋರ್ ಪೊಲೀಸ್ ಠಾಣೆಗೆ ಆಕೆ ನೇರವಾಗಿ ಹಾಜರಾಗಿದ್ದಾಳೆ.
ಆದರೆ, ಶ್ರದ್ಧಾಳ ಕಥೆಯಿಂದ ಪೊಲೀಸರಿಗೆ ಸಮಾಧಾನವಾಗಿಲ್ಲ ಮತ್ತು ಮದುವೆ ಪ್ರಮಾಣಪತ್ರವನ್ನು ಹಾಜರುಪಡಿಸುವಂತೆ ಸೂಚಿಸಿದ್ದಾರೆ. ಇತ್ತ, ಸಾರ್ಥಕ್‌ನನ್ನು ವಿಚಾರಿಸಿದಾಗ, ತಾನು ಹಲವು ದಿನಗಳಿಂದ ಶ್ರದ್ಧಾಳ ಸಂಪರ್ಕದಲ್ಲೇ ಇರಲಿಲ್ಲ ಎಂದು ಹೇಳಿದ್ದಾನೆ.
ಮಗಳ ಮದುವೆ ವಿಷಯ ಕೇಳಿ ಆಘಾತಕ್ಕೊಳಗಾದ ಆಕೆಯ ತಂದೆ ಅನಿಲ್ ತಿವಾರಿ, “ನಾನು ಈ ಮದುವೆಯನ್ನು ಒಪ್ಪುವುದಿಲ್ಲ. ಆಕೆ ಮನೆಗೆ ಬರಲು ನಾನು ಹಣ ಕಳುಹಿಸಿದರೂ, ಆಕೆ ಕರಣ್‌ದೀಪ್ ಜೊತೆಯಲ್ಲೇ ಉಳಿದುಕೊಂಡಳು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, “ನನ್ನ ಮಗಳು ಮಾನಸಿಕವಾಗಿ ಸ್ಥಿರವಾಗಿಲ್ಲ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ನಿಲ್ದಾಣಕ್ಕೆ ಬಂದಿದ್ದಾಗ ತಾನೇ ಅವಳನ್ನು ರಕ್ಷಿಸಿದ್ದು ಎಂದು ಕರಣ್‌ದೀಪ್ ನನ್ನ ಬಳಿ ಹೇಳಿಕೊಂಡಿದ್ದಾನೆ” ಎಂದು ಮಗಳ ಮಾನಸಿಕ ಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 23 ರಂದು ಮುಂಜಾನೆ 2 ಗಂಟೆ ಸುಮಾರಿಗೆ ಶ್ರದ್ಧಾ ಮೊಬೈಲ್ ಫೋನ್ ಇಲ್ಲದೆ ಮನೆಯಿಂದ ಹೊರಟಿದ್ದಳು. ಆಕೆ ಕಾಣೆಯಾದಾಗ, ಕುಟುಂಬಸ್ಥರು ಆಕೆಯ ಬಗ್ಗೆ ಮಾಹಿತಿ ನೀಡಿದವರಿಗೆ 51,000 ರೂಪಾಯಿ ಬಹುಮಾನ ಘೋಷಿಸಿದ್ದರು. ಮಗಳು ವಾಪಸ್ ಬರಲಿ ಎಂದು ಮೂಢನಂಬಿಕೆಯಿಂದ ಆಕೆಯ ಫೋಟೋವನ್ನು ಮನೆಯಲ್ಲಿ ತಲೆಕೆಳಗಾಗಿ ನೇತುಹಾಕಿದ್ದರು.
“ನನ್ನ ಮಗಳು ವಯಸ್ಕಳು. ಅವಳು ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ,” ಎಂದು ಅನಿಲ್ ತಿವಾರಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಸದ್ಯ, ತನಿಖೆ ಮುಂದುವರಿದಿದ್ದು, ಕುಟುಂಬದ ಮುಂದಿನ ನಡೆ ಅನಿಶ್ಚಿತವಾಗಿದೆ.