ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ನಾಯಿಯೊಂದರ ಹೆಸರು ಎರಡು ಕುಟುಂಬಗಳ ನಡುವೆ ತೀವ್ರ ಜಗಳ, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಅಂತಿಮವಾಗಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರುವಲ್ಲಿಗೆ ಬಂದು ತಲುಪಿದೆ. ತಮ್ಮ ಪಕ್ಕದ ಮನೆಯ ‘ಶರ್ಮಾ’ ಕುಟುಂಬವನ್ನು ಅಣಕಿಸುವ ಉದ್ದೇಶದಿಂದ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಗೆ ‘ಶರ್ಮಾಜಿ’ ಎಂದು ಹೆಸರಿಟ್ಟಿದ್ದೇ ಈ ವಿಚಿತ್ರ ವಿವಾದಕ್ಕೆ ಕಾರಣವಾಗಿದೆ.
ರಾಜೇಂದ್ರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಭೂಪೇಂದ್ರ ಸಿಂಗ್ ಎಂಬಾತ ತನ್ನ ಸಾಕು ನಾಯಿಗೆ ‘ಶರ್ಮಾ’ ಎಂದು ಹೆಸರಿಟ್ಟಿದ್ದರು. ಇದನ್ನು ಅವರ ನೆರೆಮನೆಯ ವೀರೇಂದ್ರ ಶರ್ಮಾ ಮತ್ತು ಅವರ ಪತ್ನಿ ಕಿರಣ್ ಶರ್ಮಾ ದಂಪತಿ ತೀವ್ರವಾಗಿ ವಿರೋಧಿಸಿದ್ದಾರೆ. “ಭೂಪೇಂದ್ರ ಸಿಂಗ್ ಉದ್ದೇಶಪೂರ್ವಕವಾಗಿ ತನ್ನ ಸ್ನೇಹಿತರ ಮುಂದೆ ನಾಯಿಯನ್ನು ‘ಶರ್ಮಾ ಜಿ’ ಎಂದು ಕರೆದು, ಆಕ್ಷೇಪಾರ್ಹವಾಗಿ ಮಾತನಾಡಿ ನಮ್ಮನ್ನು ಅವಮಾನಿಸುತ್ತಿದ್ದ” ಎಂದು ವೀರೇಂದ್ರ ಶರ್ಮಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಜಗಳ ವಿಕೋಪಕ್ಕೆ:
ಗುರುವಾರ ರಾತ್ರಿ ಈ ವಿಚಾರವಾಗಿ ಕಿರಣ್ ಶರ್ಮಾ ಆಕ್ಷೇಪ ವ್ಯಕ್ತಪಡಿಸಿದಾಗ, ಜಗಳ ತಾರಕಕ್ಕೇರಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಭೂಪೇಂದ್ರ ಮತ್ತು ಆತನ ಇಬ್ಬರು ಸಹಚರರು ಶರ್ಮಾ ದಂಪತಿಯ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸ್ ಪ್ರಕರಣ ದಾಖಲು:
ಘಟನೆಯ ನಂತರ, ಗಾಯಗೊಂಡ ದಂಪತಿ ರಾಜೇಂದ್ರ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ, ಪೊಲೀಸರು ಭೂಪೇಂದ್ರ ಸಿಂಗ್ ಮತ್ತು ಆತನ ಇಬ್ಬರು ಸಹಚರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. “ವಿವಾದದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ಇದರಲ್ಲಿ ಭಾಗಿಯಾದ ಎಲ್ಲರನ್ನೂ ವಿಚಾರಣೆ ನಡೆಸಲಾಗುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ಕ್ಷುಲ್ಲಕ ವಿಚಾರ ಎರಡು ಕುಟುಂಬಗಳ ನಡುವೆ ವೈಷಮ್ಯಕ್ಕೆ ಕಾರಣವಾಗಿರುವುದು ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ.



















