ನವದೆಹಲಿ: ಈ ವರ್ಷ ದೇಶದ ಗಣರಾಜ್ಯೋತ್ಸವ ದಿನದ(Republic Day)ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೋ ಸುಬಿಯಾಂತೋ ಪಾಲ್ಗೊಳ್ಳುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ. ಆದರೆ, ಕೇಂದ್ರ ಸರ್ಕಾರ ಇನ್ನೂ ಈ ಕುರಿತು ಅಧಿಕೃತ ಮಾಹಿತಿ ನೀಡಿಲ್ಲ.
ಸುಬಿಯಾಂತೋ ಅವರು ಭಾರತದಲ್ಲಿ ಗಣರಾಜ್ಯೋತ್ಸವ ಪರೇಡ್‌ನ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಳಿಕ, ನೇರವಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು. ಆದರೆ, ಈ ಬಗ್ಗೆ ಭಾರತವು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈಗ ಇಂಡೋನೇಷ್ಯಾ(Indonesia) ಅಧ್ಯಕ್ಷರು ತಮ್ಮ ಪ್ರಯಾಣದ ಯೋಜನೆ ಬದಲಾಯಿಸಿದ್ದು, ಪಾಕ್ ಭೇಟಿಯನ್ನು ರದ್ದು ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರ ಭಾರತ ಭೇಟಿ ಬಹುತೇಕ ಖಚಿತವಾದಂತಾಗಿದೆ.
ಭಾರತ ಭೇಟಿಯ ವೇಳೆ ಸುಬಿಯಾಂತೋ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ(Narendra Modi) ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂಡೋನೇಷ್ಯಾದ ಸೇನಾ ಮುಖ್ಯಸ್ಥರಾಗಿದ್ದ ಸುಬಿಯಾಂತೋ(73) ಅವರು 2024ರ ಅಕ್ಟೋಬರ್ ನಲ್ಲಿ ದೇಶದ ಅಧ್ಯಕ್ಷರಾಗಿ ಆಯ್ಕೆಯಾದರು.
ಪ್ರತಿ ವರ್ಷವೂ, ಭಾರತವು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿದೇಶಿ ನಾಯಕರನ್ನು ಆಹ್ವಾನಿಸುತ್ತದೆ. ಕಳೆದ ವರ್ಷ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರನ್(Emmanuel Macron) ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. 2023ರಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಗಣರಾಜ್ಯೋತ್ಸವ ಪರೇಡ್ ಗೆ ಸಾಕ್ಷಿಯಾಗಿದ್ದರು. 2021 ಮತ್ತು 2022ರಲ್ಲಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮುಖ್ಯ ಅತಿಥಿಗಳಿಲ್ಲದೇ ಗಣರಾಜ್ಯೋತ್ಸವ ನಡೆದಿತ್ತು. ಅದಕ್ಕೂ ಮುನ್ನ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೋ, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ, ಅಬುಧಾಬಿ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಝಯೇದ್ ಅಲ್ ನಹ್ಯಾನ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.