ಬೆಂಗಳೂರು : ಇಂಡಿಗೋ ವಿಮಾನ ಹಾರಾಟದಲ್ಲಿ 5ನೇ ದಿನವೂ ವ್ಯತ್ಯಯ ಕಂಡುಬಂದಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ ಮುಂದುವರಿದಿದೆ.
ಇಂಡಿಗೋ ಏರ್‌ಲೈನ್‌ನಲ್ಲಿ ಸಿಬ್ಬಂದಿ ಕೊರತೆಯಿಂದ ಸೃಷ್ಠಿಯಾದ ಆವಾಂತರ ಅಂತಿಂತದ್ದಲ್ಲ. ಕಳೆದ ನಾಲ್ಕು ದಿನಗಳಲ್ಲಿ ಇಂಡಿಗೋದ ಒಂದು ಸಾವಿರಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದಾಗಿದ್ದು ಜನರು ವಿಮಾನ ನಿಲ್ದಾಣಗಳಲ್ಲಿ ಪರದಾಡುತ್ತಿರುವುದಂತೂ ಹೇಳತೀರದಾಗಿದೆ. ಆರಂಭದಲ್ಲಿ ಸಣ್ಣ ಸಮಸ್ಯೆಯಂತೆ ಭಾಸವಾದ ಇದು ಒಂದೆರಡು ದಿನಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ.
ವಿಮಾನಗಳಿದ್ದರೂ ಅದನ್ನು ಆಪರೇಟ್ ಮಾಡಲು ಸಿಬ್ಬಂದಿಗಳಿಲ್ಲದ ಸನ್ನಿವೇಶ ಇಂಡಿಗೋಗೆ ಬಂದಿದೆ. ಇದೇ ಕಾರಣದಿಂದಲೇ ದೆಹಲಿ, ಬೆಂಗಳೂರು, ಲಕ್ನೋ, ಜಮ್ಮು ಕಾಶ್ಮೀರ, ಚೆನ್ನೈ, ಹೈದರಾಬಾದ್, ಭೂಪಾಲ್ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಂಪೂರ್ಣವಾಗಿ ವಿಮಾನಗಳ ಹಾರಾಟ ರದ್ದು ಮಾಡಿರುವುದಾಗಿ ಇಂಡಿಗೋ ಘೋಷಣೆ ಮಾಡಿದೆ.
ಸದ್ಯ ತೊಂದರೆಯಾಗಿರುವ ಪ್ರಯಾಣಿಕರಿಗೆ ಪರ್ಯಾಯ ಪ್ರಯಾಣ ಆಯ್ಕೆಯನ್ನು ನೀಡಲು ಭಾರತೀಯ ರೈಲ್ವೆ ಹಲವಾರು ಪ್ರೀಮಿಯಂ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಸೇರಿಸಿ ಪ್ರಯಾಣಿಕರ ಅನುಕೂಲಕ್ಕೆ ಮುಂದಾಗಿದೆ.
ಹೆಚ್ಚಿನ ಒತ್ತಡ ಎದುರಿಸುತ್ತಿರುವ ಮಹಾನಗರಗಳಿಂದ ದೇಶಾದ್ಯಂತ ಚಲಿಸುವ 37 ರೈಲುಗಳಿಗೆ ಹೆಚ್ಚುವರಿ ತಾತ್ಕಾಲಿಕ ಕೋಚ್‌ಗಳು ಮತ್ತು ಟ್ರಿಪ್‌ಗಳನ್ನು ಸೇರಿಸಲಾಗಿದೆ ಎಂದು ಭಾರತೀಯ ರೈಲ್ವೇ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಮಂಗಳೂರು | 150ಕ್ಕೂ ಅಧಿಕ ಪದಕ ಪಡೆದ ‘ಬೋಳಾರ ಕುಟ್ಟಿ’ ಕಂಬಳದ ಕೋಣ ನಿಧನ



















