ನವದೆಹಲಿ: ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ 2025 ಶುಕ್ರವಾರ (ಜನವರಿ 17 ರಿಂದ) ರಾಷ್ಟ್ರೀಯ ರಾಜಧಾನಿ ದೆಹಲಿಯ ಮೂರು ಸ್ಥಳಗಳಲ್ಲಿ ನಡೆಯಲಿದೆ. ಭಾರತದ ಅತ್ಯಂತ ದೊಡ್ಡ ಆಟೋ ಎಕ್ಸ್ ಪೋ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ. ಆಟೋಮೊಬೈಲ್ ಕ್ಷೇತ್ರದ ಆಸಕ್ತರಲ್ಲಿ ಇದು ಕುತೂಹಲ ಮೂಡಿಸಿದೆ. ಹಾಗಾದರೆ ಭಾರತ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ ಬಗ್ಗೆ ತಿಳಿದುಕೊಳ್ಳೋಣ.
ಭೇಟಿ ನೀಡುವುದು ಹೇಗೆ?
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ ಸ್ಥಳಗಳಿಗೆ ಪ್ರವೇಶಕ್ಕಾಗಿ ಯಾವುದೇ ಶುಲ್ಕವಿಲ್ಲ. ವಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಕಡ್ಡಾಯ. ಪ್ರವಾಸಿಗರು ಅಧಿಕೃತ ವೆಬ್‌ಸೈಟ್ ಗೆ ಹೋಗಿ Visitor Register ವಿಭಾಗದಲ್ಲಿ ತಮ್ಮ ವಿವರಗಳನ್ನು ಭರ್ತಿ ಮಾಡಬೇಕು. ಇಮೇಲ್ ಮೂಲಕ ದೃಢೀಕರಣ ಪಡೆದ ನಂತರ, ಅವರ ಇಮೇಲ್ ವಿಳಾಸಕ್ಕೆ QR ಕೋಡ್ ಕಳುಹಿಸಲಾಗುತ್ತದೆ. ಈ QR ಕೋಡ್ ಪ್ರವೇಶ ಪಾಸ್ ಆಗಿ ಕಾರ್ಯನಿರ್ವಹಿಸುತ್ತದೆ.
ಯಾವ ದಿನಗಳಲ್ಲಿ ನೋಡಬಹುದು?
ಈ ಕಾರ್ಯಕ್ರಮವು ಅಧಿಕೃತವಾಗಿ ಜನವರಿ 17 (ಶುಕ್ರವಾರ) ರಿಂದ ಆರಂಭವಾಗುತ್ತದೆ. ಅಂದು ಮಾಧ್ಯಮಗಳಿಗೆ ಮೀಸಲಾಗಿರುತ್ತದೆ. ಜನವರಿ 18 (ಶನಿವಾರ) ರಂದು ವಿಶೇಷ ಆಹ್ವಾನ ಪಡೆದವರ ಮತ್ತು ಡೀಲರ್ ಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ ಸ್ಥಳಗಳು ಜನವರಿ 19 (ಭಾನುವಾರ) ರಿಂದ ಜನವರಿ 22 (ಬುಧವಾರ)ರವರೆಗೆ ಸಾರ್ವಜನಿಕರಿಗೆ ತೆರೆಯಲಾಗುತ್ತದೆ. ಈ ದಿನಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಭೇಟಿ ನೀಡಬಹುದು.
ಹೊಸ ಕಾರುಗಳು ನೋಡಲು ಎಲ್ಲಿಗೆ ಹೋಗಬೇಕು?
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ ಮೂರು ಪ್ರತ್ಯೇಕ ಸ್ಥಳಗಳಲ್ಲಿ ನಡೆಯಲಿದೆ.
ಭಾರತ ಮಂಡಪಂ, ಪ್ರಗತಿ ಮೈದಾನ
ಇದು ಮುಖ್ಯ ಸ್ಥಳವಾಗಿದ್ದು, ಅಲ್ಲಿ ಹ್ಯುಂಡೈ , ಮಾರುತಿ, MG ಮೋಟಾರ್ಸ್ ಮುಂತಾದವುಗಳ ಎಲ್ಲಾ ಹೊಸ ಕಾರುಗಳನ್ನು ನೋಡಬಹುದು. ಜೊತೆಗೆ ಬೈಕ್ ಗಳು, ಸ್ಕೂಟರ್ ಗಳು, ಎಲೆಕ್ಟ್ರಿಕ್ ವಾಹನ್‌ಗಳು ಮತ್ತು ಮೊಬಿಲಿಟಿಯ ಎಲ್ಲ ಸಾಧನೆಗಳನ್ನು ಕಾಣಬಹುದು. ಟೈರ್ ಶೋ, ಬ್ಯಾಟರಿ ಶೋ, ಮೊಬಿಲಿಟಿ ಟೆಕ್, ಸ್ಟೀಲ್ ಇನೋವೇಶನ್ ಮತ್ತು ಇಂಡಿಯಾ ಸೈಕಲ್ ಶೋ ಕೂಡ ಇಲ್ಲಿ ನಡೆಯಲಿದೆ.
ಯಶೋಭೂಮಿ ಕನ್ವೆನ್ಷನ್ ಸೆಂಟರ್
ಇಲ್ಲಿ ಜನವರಿ 18ರಿಂದ 21ರವರೆಗೆ ಆಟೋ ಎಕ್ಸ್ ಪೋ ಕಾಂಪೋನಂಟ್ ಶೋ ಆಯೋಜನೆಗೊಂಡಿದೆ.
ಇಂಡಿಯಾ ಎಕ್ಸ್ ಪೋ ಸೆಂಟರ್ & ಮಾರ್ಟ್, ಗ್ರೇಟರ್ ನೊಯ್ಡಾ
ಭಾರತ ಕನ್‌ಸ್ಟ್ರಕ್ಷನ್ ಇಕ್ವಿಪ್ ಮೆಂಟ್ ಎಕ್ಸ್ ಪೋ ಮತ್ತು ಅರ್ಬನ್ ಮೊಬಿಲಿಟಿ & ಇನ್‌ಫ್ರಾಸ್ಟ್ರಕ್ಚರ್ ಶೋ (UMIS) ಜನವರಿ 19 ರಿಂದ 22ರವರೆಗೆ ಇಲ್ಲಿ ನಡೆಯಲಿದೆ.
ಹೋಗುವುದು ಹೇಗೆ?
ಪ್ರಗತಿ ಮೈದಾನದಲ್ಲಿರುವ ಭಾರತ ಮಂಡಪಂ ನವದೆಹಲಿಯ ಮೆಟ್ರೋ ಮೂಲಕ ಸುಲಭವಾಗಿ ತಲುಪಬಹುದು. ಬ್ಲೂ ಲೈನ್ ಮೆಟ್ರೋವನ್ನು ಬಳಸಿಕೊಂಡು ಸುಪ್ರೀಂ ಕೋರ್ಟ್ ಮೆಟ್ರೋ ನಿಲ್ದಾಣಕ್ಕೆ ಹೋಗಬಹುದು. ಅಲ್ಲಿಂದ ಶಟಲ್ ಸೇವೆಗಳ ಮೂಲಕ ಸ್ಥಳಕ್ಕೆ ಹೋಗಬಹುದು. ಕಾರಿನಲ್ಲಿ ಬರುತ್ತಿರುವವರಿಗೆ ಸಮೀಪದಲ್ಲೇ ಪಾರ್ಕಿಂಗ್ ವ್ಯವಸ್ಥೆ ಇದೆ.