ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸುವ ಕನಸು ಕಾಣುತ್ತಿರುವ ಲಕ್ಷಾಂತರ ಭಾರತೀಯರಿಗೆ ನಿರಾಸೆಯಾಗಿದ್ದು, ಅಮೆರಿಕದ ಬಹುನಿರೀಕ್ಷಿತ ಡೈವರ್ಸಿಟಿ ವೀಸಾ (ಡಿವಿ) ಲಾಟರಿ ಕಾರ್ಯಕ್ರಮದಿಂದ ಭಾರತವನ್ನು ಕನಿಷ್ಠ 2028ರವರೆಗೆ ಹೊರಗಿಡಲಾಗಿದೆ. ‘ಗ್ರೀನ್ ಕಾರ್ಡ್ ಲಾಟರಿ’ ಎಂದೇ ಜನಪ್ರಿಯವಾಗಿರುವ ಈ ಯೋಜನೆಯಿಂದ ಭಾರತೀಯರು ಹೊರಗುಳಿಯಲು ಕಳೆದ ಐದು ವರ್ಷಗಳಲ್ಲಿ ಅಮೆರಿಕಕ್ಕೆ ವಲಸೆ ಹೋದವರ ಸಂಖ್ಯೆ ಹೆಚ್ಚಾಗಿರುವುದೇ ಪ್ರಮುಖ ಕಾರಣವಾಗಿದೆ.
ನಿಯಮಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ 50,000ಕ್ಕಿಂತ ಕಡಿಮೆ ನಾಗರಿಕರು ಅಮೆರಿಕಕ್ಕೆ ವಲಸೆ ಹೋಗಿರುವ ದೇಶಗಳಿಗೆ ಮಾತ್ರ ಡಿವಿ ಲಾಟರಿಯಲ್ಲಿ ಭಾಗವಹಿಸಲು ಅವಕಾಶವಿದೆ. ಆದರೆ, ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗುವವರ ಸಂಖ್ಯೆ ಈ ಮಿತಿಯನ್ನು ಮೀರಿದೆ. ಹೀಗಾಗಿ ಭಾರತಕ್ಕೆ ಅವಕಾಶ ನಿರಾಕರಿಸಲಾಗಿದೆ.
ಅಂಕಿಅಂಶಗಳ ಪ್ರಕಾರ, 2021ರಲ್ಲಿ 93,450, 2022ರಲ್ಲಿ 1,27,010 ಹಾಗೂ 2023ರಲ್ಲಿ 78,070 ಭಾರತೀಯರು ಅಮೆರಿಕಕ್ಕೆ ವಲಸೆ ಹೋಗಿದ್ದಾರೆ. ಈ ಅಧಿಕ ಸಂಖ್ಯೆಯ ಕಾರಣದಿಂದಾಗಿ, 2028ರವರೆಗಿನ ಡಿವಿ ಲಾಟರಿ ಕಾರ್ಯಕ್ರಮಗಳಿಗೆ ಭಾರತವು ಸ್ವಯಂಚಾಲಿತವಾಗಿ ಅನರ್ಹಗೊಂಡಿದೆ. ಭಾರತದಂತೆಯೇ ಚೀನಾ, ದಕ್ಷಿಣ ಕೊರಿಯಾ, ಕೆನಡಾ ಮತ್ತು ಪಾಕಿಸ್ತಾನದಂತಹ ದೇಶಗಳಿಗೂ 2026ರ ಡಿವಿ ಲಾಟರಿಯಲ್ಲಿ ಅವಕಾಶ ನಿರಾಕರಿಸಲಾಗಿದೆ.
ಭಾರತೀಯರಿಗೆ ಉಳಿದಿರುವ ದಾರಿಗಳೇನು?
ಡಿವಿ ಲಾಟರಿ ಮಾರ್ಗ ಮುಚ್ಚಿರುವುದರಿಂದ, ಅಮೆರಿಕದಲ್ಲಿ ಖಾಯಂ ಆಗಿ ನೆಲೆಸಲು ಬಯಸುವ ಭಾರತೀಯರಿಗೆ ಕೆಲವೇ ದಾರಿಗಳು ಉಳಿದಿವೆ.
- ಎಚ್-1ಬಿ ವೃತ್ತಿ ವೀಸಾವನ್ನು ಖಾಯಂ ವಾಸ್ತವ್ಯಕ್ಕೆ ಪರಿವರ್ತಿಸಿಕೊಳ್ಳುವುದು.
- ಹೂಡಿಕೆ ಆಧಾರಿತ ವಲಸೆ (ಇನ್ವೆಸ್ಟ್‌ಮೆಂಟ್ ಬೇಸ್ಡ್ ಇಮಿಗ್ರೇಷನ್).
- ಅಮೆರಿಕದಲ್ಲಿ ಆಶ್ರಯ ಕೋರುವುದು.
- ಕುಟುಂಬದ ಸದಸ್ಯರ ಪ್ರಾಯೋಜಕತ್ವದ ಮೂಲಕ ಅರ್ಜಿ ಸಲ್ಲಿಸುವುದು.
ಆದಾಗ್ಯೂ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿಗಳಿಂದಾಗಿ ಈ ಮಾರ್ಗಗಳು ಕೂಡ ಮತ್ತಷ್ಟು ಕಿರಿದಾಗುತ್ತಿವೆ. ಟ್ರಂಪ್ ಆಡಳಿತವು ವಿದ್ಯಾರ್ಥಿ ವೀಸಾಗಳ ಮೇಲೆ ಕಠಿಣ ನಿಲುವು ತಳೆದಿದ್ದು, ಸಾಮಾಜಿಕ ಮಾಧ್ಯಮಗಳ ಪರಿಶೀಲನೆ ಹಾಗೂ ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸಿದೆ. ಇದರಿಂದಾಗಿ ಅಮೆರಿಕಕ್ಕೆ ವಲಸೆ ಹೋಗುವ ಪ್ರಕ್ರಿಯೆಯು ಭಾರತೀಯರಿಗೆ ಇನ್ನಷ್ಟು ಸವಾಲಿನದ್ದಾಗಿದೆ.