ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಾಫ್ಟ್‌ವೇರ್ ವೃತ್ತಿಪರರಾಗಿದ್ದ ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯ 29 ವರ್ಷದ ಮೊಹಮ್ಮದ್ ನಿಜಾಮುದ್ದೀನ್ ಎಂಬವರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ರೂಮ್‌ಮೇಟ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸುತ್ತಿದ್ದಾಗ ಗುಂಡು ಹಾರಿಸಿದ್ದೇವೆ ಎಂದು ಪೊಲೀಸರು ಹೇಳಿದರೆ, ಈ ವಾದವನ್ನು ಒಪ್ಪದ ಕುಟುಂಬವು ಮಗನ ಮೃತದೇಹವನ್ನು ತಾಯ್ನಾಡಿಗೆ ತರಲು ಭಾರತ ಸರ್ಕಾರದ ಸಹಾಯವನ್ನು ಕೋರಿದೆ.
ಸೆಪ್ಟೆಂಬರ್ 3ರಂದು ಈ ಘಟನೆ ನಡೆದಿದ್ದರೂ, ಗುರುವಾರ ತಮ್ಮ ಮಗನ ಸ್ನೇಹಿತನ ಮೂಲಕ ಸಾವಿನ ವಿಷಯ ತಿಳಿದುಬಂದಿದೆ ಎಂದು ನಿಜಾಮುದ್ದೀನ್ ಅವರ ತಂದೆ ಮೊಹಮ್ಮದ್ ಹಸ್ನುದ್ದೀನ್ ಹೇಳಿದ್ದಾರೆ. “ಅದು ಸಣ್ಣ ವಿಷಯಕ್ಕೆ ನಡೆದ ಜಗಳ. ಆದರೆ ಅಷ್ಟಕ್ಕೇ ಪೊಲೀಸರು ನನ್ನ ಮಗನನ್ನು ಏಕೆ ಗುಂಡಿಕ್ಕಿ ಕೊಂದರು ಎಂಬುದು ತಿಳಿಯುತ್ತಿಲ್ಲ,” ಎಂದು ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಬರೆದ ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ. ಮೃತದೇಹವನ್ನು ಮೆಹಬೂಬ್‌ನಗರಕ್ಕೆ ತರಲು ವಾಷಿಂಗ್ಟನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ಮೂಲಕ ತುರ್ತು ಸಹಾಯ ಮಾಡುವಂತೆ ಅವರು ಮನವಿ ಮಾಡಿದ್ದಾರೆ. ಮಜ್ಲಿಸ್ ಬಚಾವೊ ತೆಹ್ರೀಕ್ (MBT) ಪಕ್ಷದ ವಕ್ತಾರ ಅಮ್ಜದ್ ಉಲ್ಲಾ ಖಾನ್ ಅವರು ಕುಟುಂಬದ ಪರವಾಗಿ ಸರ್ಕಾರದ ಮಧ್ಯಸ್ಥಿಕೆಗೆ ಒತ್ತಾಯಿಸಿದ್ದಾರೆ.
ಅಮೆರಿಕ ಪೊಲೀಸರ ಸ್ಪಷ್ಟನೆ
ಈ ಘಟನೆ ಕುರಿತು ಸಾಂಟಾ ಕ್ಲಾರಾ ಪೊಲೀಸರು ಹೇಳಿಕೆ ನೀಡಿದ್ದು, “ಸೆಪ್ಟೆಂಬರ್ 3 ರಂದು ಬೆಳಿಗ್ಗೆ 6:18 ಕ್ಕೆ ಸ್ಥಳಕ್ಕೆ ಧಾವಿಸಿದಾಗ, ನಿಜಾಮುದ್ದೀನ್ ಚಾಕು ಹಿಡಿದುಕೊಂಡಿದ್ದನು. ಇಬ್ಬರು ರೂಮ್‌ಮೇಟ್‌ಗಳ ನಡುವಿನ ಜಗಳ ಹಿಂಸಾಚಾರಕ್ಕೆ ತಿರುಗಿತ್ತು. ನಿಜಾಮುದ್ದೀನ್ ಮತ್ತೆ ದಾಳಿ ಮಾಡುವ ಬೆದರಿಕೆ ಹಾಕುತ್ತಿದ್ದಾಗ ಅಧಿಕಾರಿಗಳು ಮನೆಯೊಳಗೆ ನುಗ್ಗಬೇಕಾಯಿತು” ಎಂದು ತಿಳಿಸಿದ್ದಾರೆ. ಪೊಲೀಸ್ ಮುಖ್ಯಸ್ಥ ಕೋರಿ ಮೋರ್ಗಾನ್, “ನಮ್ಮ ಅಧಿಕಾರಿಯ ಕ್ರಮದಿಂದಾಗಿ ಕನಿಷ್ಠ ಒಬ್ಬರ ಪ್ರಾಣ ಉಳಿದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ” ಎಂದು ಹೇಳಿದ್ದಾರೆ. ಘಟನಾ ಸ್ಥಳದಿಂದ ಎರಡು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.