ಚೆಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ಪುರುಷರ ತಂಡ ಹಾಗೂ ಮಹಿಳಾ ತಂಡ ಚಿನ್ನ ಗೆದ್ದ ಸಾಧನೆ ಮಾಡಿವೆ.
ಹಂಗೇರಿಯಲ್ಲಿ ನಡೆಯುತ್ತಿರುವ ಚೆಸ್ ಒಲಿಂಪಿಯಾಡ್ ನಲ್ಲಿ ಭಾರತವು ಮೊದಲ ಬಾರಿಗೆ ಮುಕ್ತ ವಿಭಾಗದಲ್ಲಿ ಅಂದರೆ ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಏಕಾಕಾಲದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಡಿ.ಗುಕೇಶ್, ಆರ್.ಪ್ರಗ್ನಾನಂದ್, ಅರ್ಜುನ್ ಎರಿಗೇಸಿ ಸೇರಿದಂತೆ ಐವರು ಆಟಗಾರರನ್ನು ಒಳಗೊಂಡ ಭಾರತ ಪುರುಷರ ತಂಡ ಮುಕ್ತ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರೆ, ತಾನಿಯಾ ಸಚ್‌ದೇವ್, ಆರ್ ವೈಶಾಲಿ, ದಿವ್ಯಾ ದೇಶಮುಖ್ ಅವರಿದ್ದ ಮಹಿಳಾ ತಂಡವೂ ಚಿನ್ನದ ಪದಕಕ್ಕೆ ಮುತ್ತಿಕ್ಕಿ ಇತಿಹಾಸ ಬರೆದಿದೆ. ಭಾರತ ಇದೇ ಮೊದಲ ಬಾರಿಗೆ ಎರಡೂ ವಿಭಾಗಗಳಲ್ಲಿ ಚಿನ್ನ ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ. ಈ ಸುದ್ದಿ ಕೇಳಿ ಇಡೀ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಬುಡಾಪೆಸ್ಟ್ ನಲ್ಲಿ ನಡೆದ 45ನೇ ಚೆಸ್ ಒಲಿಂಪಿಯಾಡ್ ನಲ್ಲಿ ಭಾರತವನ್ನು ಪ್ರಶಸ್ತಿಯ ಪ್ರಬಲ ಸ್ಪರ್ಧಿ ಎಂದೇ ಪರಿಗಣಿಸಲಾಗಿತ್ತು. ನಿರೀಕ್ಷೆಯಂತೆ ಭಾರತದ ಎರಡೂ ತಂಡಗಳು ಗೆದ್ದು ಬೀಗಿವೆ.
ಇದು ಚೆಸ್ ನ ವಿಶ್ವದ ಅತಿದೊಡ್ಡ ತಂಡ ಪಂದ್ಯಾವಳಿಯಾಗಿದೆ. ಈ ಟೂರ್ನಿಯಲ್ಲಿ ಜಗತ್ತಿನ ಹಲವಾರು ದೇಶಗಳು ಭಾಗವಹಿಸುತ್ತವೆ. 2022ರಲ್ಲಿ ಭಾರತದಲ್ಲಿ ಈ ಟೂರ್ನಿ ನಡೆದಿತ್ತು. ಆಗ ಭಾರತ ತಂಡವು ಕಂಚಿನ ಪದಕ ಗೆದ್ದಿತ್ತು. ಆದರೆ, ಈ ಬಾರಿ ಹಂಗೇರಿಯಲ್ಲಿ ಚಿನ್ನ ಗೆಲ್ಲುವುದರ ಮೂಲಕ ಇತಿಹಾಸ ನಿರ್ಮಿಸಿದೆ.