ಚಂಡೀಗಢ: ಗುರುನಾನಕ್ ದೇವ್ ಅವರ ಪ್ರಕಾಶ್ ಪರ್ವ್ ಆಚರಣೆಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಭಾರತೀಯ ಸಿಖ್ ಯಾತ್ರಾರ್ಥಿಗಳ ತಂಡದಲ್ಲಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಅವರು ಇಸ್ಲಾಂಗೆ ಮತಾಂತರಗೊಂಡು ಪಾಕಿಸ್ತಾನಿ ಪ್ರಜೆಯನ್ನು ವಿವಾಹವಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ‘ನಿಕಾಹ್ ನಾಮಾ’ ಪತ್ರವೊಂದು ಬಹಿರಂಗಗೊಂಡಿದೆ.
ಯಾತ್ರೆಯ ವೇಳೆ ಕಣ್ಮರೆಯಾದ ಮಹಿಳೆ
ಪಂಜಾಬ್‌ನ ಕಪುರ್ತಲಾ ನಿವಾಸಿಯಾದ 52 ವರ್ಷದ ಸರಬ್ಜಿತ್ ಕೌರ್, ಗುರುನಾನಕ್ ದೇವ್ ಅವರ 555ನೇ ಜನ್ಮದಿನೋತ್ಸವದ ಅಂಗವಾಗಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಸಿಖ್ ‘ಜಥಾ’ (ಯಾತ್ರಾರ್ಥಿಗಳ ತಂಡ) ಜೊತೆ ಪಾಕಿಸ್ತಾನಕ್ಕೆ ತೆರಳಿದ್ದರು. ನವೆಂಬರ್ 4 ರಂದು 1,992 ಸಿಖ್ ಯಾತ್ರಾರ್ಥಿಗಳು ವಾಘಾ-ಅಟ್ಟಾರಿ ಗಡಿ ಮೂಲಕ ಪಾಕಿಸ್ತಾನ ಪ್ರವೇಶಿಸಿದ್ದರು. ಸುಮಾರು 10 ದಿನಗಳ ಯಾತ್ರೆಯ ನಂತರ, ನವೆಂಬರ್ 13 ರಂದು ತಂಡವು ಭಾರತಕ್ಕೆ ಮರಳಿತು. ಆದರೆ, ಸರಬ್ಜಿತ್ ಕೌರ್ ತಂಡದೊಂದಿಗೆ ವಾಪಸಾಗಿರಲಿಲ್ಲ.
ವೈರಲ್ ಆದ ‘ನಿಕಾಹ್ ನಾಮಾ’
ಇದೀಗ ಉರ್ದು ಭಾಷೆಯಲ್ಲಿರುವ ‘ನಿಕಾಹ್ ನಾಮಾ’ (ಇಸ್ಲಾಮಿಕ್ ವಿವಾಹ ಒಪ್ಪಂದ) ಪತ್ರವೊಂದು ಬೆಳಕಿಗೆ ಬಂದಿದೆ. ಅದರ ಪ್ರಕಾರ, ಸರಬ್ಜಿತ್ ಕೌರ್ ಅವರು ಲಾಹೋರ್‌ನಿಂದ ಸುಮಾರು 56 ಕಿ.ಮೀ ದೂರದಲ್ಲಿರುವ ಶೇಖುಪುರದ ನಿವಾಸಿ ನಾಸಿರ್ ಹುಸೇನ್ ಎಂಬಾತನನ್ನು ವಿವಾಹವಾಗಿದ್ದಾರೆ. ವಿವಾಹಕ್ಕೂ ಮುನ್ನ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನು ‘ನೂರ್’ ಎಂದು ಬದಲಿಸಿಕೊಂಡಿದ್ದಾರೆ ಎಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ದಾಖಲೆಯ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ. ಸರಬ್ಜಿತ್ ಕೌರ್ ವಿಚ್ಛೇದಿತರಾಗಿದ್ದು, ಅವರ ಮಾಜಿ ಪತಿ ಕಳೆದ 30 ವರ್ಷಗಳಿಂದ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಅಧಿಕಾರಿಗಳಿಂದ ತನಿಖೆ ಆರಂಭ
ಸರಬ್ಜಿತ್ ಕೌರ್ ಭಾರತಕ್ಕೆ ಹಿಂತಿರುಗದಿರುವುದನ್ನು ಗಮನಿಸಿದ ವಲಸೆ ಇಲಾಖೆ, ತಕ್ಷಣವೇ ಪಂಜಾಬ್ ಪೊಲೀಸರಿಗೆ ಮಾಹಿತಿ ನೀಡಿದೆ. ಈ ಕುರಿತು ಭಾರತೀಯ ರಾಯಭಾರ ಕಚೇರಿಯು ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿ ವರ್ಷ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (SGPC) ಯಾತ್ರಾರ್ಥಿಗಳ ತಂಡವನ್ನು ಪಾಕಿಸ್ತಾನದ ಐತಿಹಾಸಿಕ ಗುರುದ್ವಾರಗಳಿಗೆ ಕಳುಹಿಸುತ್ತದೆ. ಈ ವರ್ಷ ಭದ್ರತಾ ಕಾರಣಗಳಿಂದ ಸರ್ಕಾರ ಮೊದಲು ಅನುಮತಿ ನಿರಾಕರಿಸಿತ್ತು, ಆದರೆ ನಂತರ 10 ದಿನಗಳ ಯಾತ್ರೆಗೆ ಅವಕಾಶ ನೀಡಿತ್ತು.
ಇದನ್ನೂ ಓದಿ: ಶ್ರೀನಗರ ಪೊಲೀಸ್ ಠಾಣೆಯಲ್ಲಿ ಸ್ಫೋಟಗೊಂಡಿದ್ದು ಫರಿದಾಬಾದ್ ವೈದ್ಯರಿಂದ ವಶಪಡಿಸಿಕೊಂಡಿದ್ದ ಸ್ಫೋಟಕ!



















