ಬೆಂಗಳೂರು: ದೇಶದಲ್ಲೀಗ ಹಬ್ಬಗಳ ಸೀಸನ್ ಆರಂಭವಾಗಿದೆ. ವರಮಹಾಲಕ್ಷ್ಮೀ ಹಬ್ಬದಿಂದಲೇ ಸೀಸನ್ ಆರಂಭವಾಗುತ್ತದೆ. ಮುಂದಿನ ದಿನಗಳಲ್ಲಿ ಗಣೇಶ ಚತುರ್ಥಿ, ದಸರಾ, ದೀಪಾವಳಿ, ಅಕ್ಷಯ ತೃತೀಯ ಸೇರಿ ಹಲವು ಹಬ್ಬಗಳು ಬರುತ್ತವೆ. ಆಗೆಲ್ಲ ನಗರಗಳಲ್ಲಿ ಉದ್ಯೋಗ ಮಾಡುತ್ತಿರುವವರು ತಮ್ಮ ಊರಿಗೆ ತೆರಳುತ್ತಾರೆ. ರಜೆ ಅಂತ ಪ್ರವಾಸಕ್ಕೂ ಹೋಗುವವರು ಇದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡೇ ರೈಲ್ವೆ ಇಲಾಖೆಯು ರೈಲು ಪ್ರಯಾಣಿಕರಿಗೆ ಶೇ.20ರಷ್ಟು ಡಿಸ್ಕೌಂಟ್ ಘೋಷಣೆ ಮಾಡಿದೆ.
ಹೌದು, ಹಬ್ಬಗಳ ಸೀಸನ್ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಟಿಕೆಟ್ ಬೆಲೆಯಲ್ಲಿ ಶೇ.20ರಷ್ಟು ಡಿಸ್ಕೌಂಟ್ ಘೋಷಣೆ ಮಾಡಿದೆ. ಅಕ್ಟೋಬರ್ 13ರಿಂದ 26ರೊಳಗಿನ ಪ್ರಯಾಣ ಹಾಗೂ ನವೆಂಬರ್ 17ರಿಂದ ಡಿಸೆಂಬರ್ 1ರೊಳಗಿನ ಪ್ರಯಾಣದ ಬುಕಿಂಗ್ ಮೇಲೆ ಮಾತ್ರ ಡಿಸ್ಕೌಂಟ್ ಅನ್ವಯವಾಗಲಿದೆ. ಈ ರಿಯಾಯಿತಿ ಸೌಲಭ್ಯದ ಬುಕಿಂಗ್ ಆಗಸ್ಟ್ 14ರಿಂದ ಪ್ರಾರಂಭವಾಗುತ್ತದೆ.
ರಾಜಧಾನಿ, ಶತಾಬ್ದಿ, ತುರಂತ್ ಸೇರಿ ಮುಂತಾದ ಫ್ಲೆಕ್ಸಿ ದರದ ರೈಲುಗಳಲ್ಲಿ ಈ ರಿಯಾಯಿತಿ ಅನ್ವಯಿಸುವುದಿಲ್ಲ. ಈ ಯೋಜನೆಯಡಿಯಲ್ಲಿ, ಒಂದೇ ಪ್ರಯಾಣಿಕರ ಗುಂಪು ಹೋಗುವ ಮತ್ತು ವಾಪಸಾಗುವ ಪ್ರಯಾಣ ಎರಡಕ್ಕೂ ಟಿಕೆಟ್ಗಳನ್ನು ಬುಕ್ ಮಾಡಿದಾಗ ಮಾತ್ರ ರಿಯಾಯಿತಿ ಅನ್ವಯವಾಗುತ್ತದೆ. ದೀಪಾವಳಿ ಸೇರಿದಂತೆ ಇತರ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಈ ಕ್ರಮಕೈಗೊಳ್ಳಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ರೌಂಡ್ ಟ್ರಿಪ್ ಟಿಕೆಟ್ ಪ್ರಯಾಣದ ರಿಯಾಯಿತಿ ಸೌಲಭ್ಯ ಸಿಗಬೇಕಾದರೆ ಪ್ರಯಾಣದ ಆರಂಭ ಹಾಗೂ ಮುಕ್ತಾಯದ ಸ್ಥಳದಲ್ಲಿ ಬದಲಾಗುವಂತಿಲ್ಲ. ಯಾರ ಹೆಸರಿಗೆ ಹೋಗುವ ಟಿಕೆಟ್ ಬುಕ್ ಮಾಡಿರುತ್ತಾರೋ ರಿಟರ್ನ್ ಟಿಕೆಟ್ ಕೂಡ ಅದೇ ಹೆಸರಿಗೆ ಇದ್ದರೆ ಮಾತ್ರ ರಿಯಾಯಿತಿ ಅನ್ವಯವಾಗುತ್ತದೆ. ಅಷ್ಟೇ ಅಲ್ಲದೇ ರಿಟರ್ನ್ ಟಿಕೆಟ್ ಬುಕಿಂಗ್ ಖಚಿತ ಆದ ಮೇಲೆಯೇ ಒಟ್ಟಾರೆ ರೌಂಡ್ ಟ್ರಿಪ್ನ ಶೇ 20 ರಷ್ಟು ರಿಯಾಯಿತಿ ಸಿಗುತ್ತದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.