ನವದೆಹಲಿ : ದೇಶದ ಆಧ್ಯಾತ್ಮಿಕ ಪ್ರವಾಸೋದ್ಯಮ ಕ್ಷೇತ್ರವು ಇತ್ತೀಚೆಗೆ ಹೆಚ್ಚು ಜನರನ್ನು ಸೆಳೆಯುತ್ತಿರುವಂತೆಯೇ, ವಾರಾಣಸಿ, ರಿಷಿಕೇಶ, ಅಯೋಧ್ಯೆ ಸೇರಿದಂತೆ ಹಲವು ಪ್ರಮುಖ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ತೀರ್ಥಯಾತ್ರಾ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ, ಭಾರತೀಯ ರೈಲ್ವೆಯು ಭಾರತ ಮತ್ತು ನೇಪಾಳದಲ್ಲಿರುವ ಭಗವಾನ್ ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳನ್ನು ಒಳಗೊಂಡ 17 ದಿನಗಳ ವಿಶೇಷ ‘ಶ್ರೀ ರಾಮಾಯಣ ಯಾತ್ರೆ’ಯನ್ನು ಘೋಷಿಸಿದೆ. ಮಾರ್ಚ್ 30ರಂದು ಈ ಆಧ್ಯಾತ್ಮಿಕ ಪ್ರವಾಸ ಆರಂಭವಾಗಲಿದೆ.
‘ಭಾರತ್ ಗೌರವ್’ ರೈಲಲ್ಲಿ ಪ್ರಯಾಣ
ಈ ವಿಶೇಷ ಯಾತ್ರೆಯು ‘ಭಾರತ್ ಗೌರವ್ ಡಿಲಕ್ಸ್ ಎಸಿ ಟೂರಿಸ್ಟ್’ ರೈಲಿನ ಮೂಲಕ ನಡೆಯಲಿದೆ. ಪ್ರವಾಸಿಗರಿಗೆ ಐಷಾರಾಮಿ ಹಾಗೂ ಆರಾಮದಾಯಕ ಅನುಭವವನ್ನು ನೀಡುವ ನಿಟ್ಟಿನಲ್ಲಿ ಐಆರ್‌ಸಿಟಿಸಿ ಈ ರೈಲಿನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿದೆ. ಪ್ರಥಮ ದರ್ಜೆ (1AC), ದ್ವಿತೀಯ ದರ್ಜೆ (2AC) ಹಾಗೂ ತೃತೀಯ ದರ್ಜೆ (3AC) ಬೋಗಿಗಳನ್ನು ಒಳಗೊಂಡಿರುವ ಈ ರೈಲಿನಲ್ಲಿ ಆಧುನಿಕ ಅಡುಗೆಮನೆ, ಎರಡು ಸುಸಜ್ಜಿತ ರೆಸ್ಟೋರೆಂಟ್‌ಗಳು, ಸೆನ್ಸಾರ್ ಆಧಾರಿತ ಶೌಚಾಲಯಗಳು, ಸ್ನಾನದ ಕೋಣೆಗಳು ಹಾಗೂ ಫುಟ್ ಮಸಾಜರ್‌ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜತೆಗೆ ಪ್ರತಿಯೊಂದು ಬೋಗಿಯಲ್ಲೂ ಸಿಸಿಟಿವಿ ಕ್ಯಾಮೆರಾಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಮಾರ್ಗ ವಿವರ ಹೀಗೆ:
ಇದು 16 ರಾತ್ರಿ ಮತ್ತು 17 ಹಗಲುಗಳ ಪ್ರವಾಸ. ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಹೊರಡಲಾಗುತ್ತದೆ. ಒಟ್ಟು 7,560 ಕಿಲೋಮೀಟರ್ ದೂರವನ್ನು ಕ್ರಮಿಸಲಾಗುತ್ತದೆ. ಮೊದಲಿಗೆ ಅಯೋಧ್ಯೆಯ ರಾಮ ಜನ್ಮಭೂಮಿ, ಹನುಮಾನ್ ಗರ್ಹಿ ಮತ್ತು ರಾಮ್ ಕಿ ಪೈಡಿಗೆ ಭೇಟಿ ನೀಡುವ ಪ್ರವಾಸಿಗರು, ನಂತರ ನಂದಿಗ್ರಾಮದ ಭರತ-ಹನುಮಾನ್ ದೇವಾಲಯವನ್ನು ದರ್ಶಿಸಲಿದ್ದಾರೆ. ಬಿಹಾರದ ಸೀತಾಮಢಿಯ ಮೂಲಕ ರಸ್ತೆ ಮಾರ್ಗವಾಗಿ ನೇಪಾಳದ ಜನಕಪುರಕ್ಕೆ ತೆರಳಿ ಸೀತೆಯ ಜನ್ಮಸ್ಥಳವಾದ ಜಾನಕಿ ದೇವಾಲಯ ಹಾಗೂ ಇನ್ನಿತರ ತಾಣಗಳಿಗೆ ಭೇಟಿ ನೀಡಲಿದ್ದಾರೆ.
ಈ ಸುದೀರ್ಘ ಪಯಣದಲ್ಲಿ ಬಕ್ಸರ್‌ನ ರಾಮ್ ರೇಖಾ ಘಾಟ್, ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯ ಸೇರಿದಂತೆ ಹಲವು ಮಂದಿರಗಳು ಮತ್ತು ಗಂಗಾ ಆರತಿ, ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮ, ಶೃಂಗವೇರಪುರ, ಚಿತ್ರಕೂಟದ ಗುಪ್ತ ಗೋದಾವರಿ, ನಾಸಿಕ್‌ನ ತ್ರಯಂಬಕೇಶ್ವರ ಮತ್ತು ಪಂಚವಟಿ, ಕರ್ನಾಟಕದ ಹಂಪಿಯಲ್ಲಿರುವ ಅಂಜನಾದ್ರಿ ಬೆಟ್ಟ ಹಾಗೂ ತಮಿಳುನಾಡಿನ ರಾಮೇಶ್ವರಂನ ಪ್ರಮುಖ ಧಾರ್ಮಿಕ ಕೇಂದ್ರಗಳ ದರ್ಶನವನ್ನು ಈ ಪ್ಯಾಕೇಜ್ ಒಳಗೊಂಡಿದೆ. ಎಲ್ಲ ತಾಣಗಳ ಭೇಟಿಯ ನಂತರ 17ನೇ ದಿನದಂದು ರೈಲು ಮರಳಿ ದೆಹಲಿಯನ್ನು ತಲುಪಲಿದೆ.
ಟಿಕೆಟ್ ದರ ಎಷ್ಟು?
ಈ ಯಾತ್ರೆಯಲ್ಲಿ ಒಟ್ಟು 150 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಟಿಕೆಟ್ ದರವನ್ನು ಪ್ರಯಾಣಿಕರು ಆಯ್ಕೆ ಮಾಡುವ ಬೋಗಿಗಳ ಆಧಾರದ ಮೇಲೆ ನಿಗದಿಪಡಿಸಲಾಗಿದೆ. ಮೂವರು ಹಂಚಿಕೊಳ್ಳುವ (ಟ್ರಿಪಲ್ ಆಕ್ಯುಪೆನ್ಸಿ) ಟಿಕೆಟ್‌ಗೆ ಕನಿಷ್ಠ 1,11,630 ರೂಪಾಯಿ ನಿಗದಿಪಡಿಸಲಾಗಿದೆ. ತೃತೀಯ ದರ್ಜೆ (3AC) ಎಸಿ ಪ್ರಯಾಣಕ್ಕೆ ತಲಾ 1,14,100 ರೂ., ದ್ವಿತೀಯ ದರ್ಜೆಗೆ (2AC) 1,51,225 ರೂ. ಹಾಗೂ ಪ್ರಥಮ ದರ್ಜೆಗೆ (1AC) 1,64,940 ರೂ. ದರವನ್ನು ನಿಗದಿ ಮಾಡಲಾಗಿದೆ. ಈ ಆಕರ್ಷಕ ಪ್ಯಾಕೇಜ್‌ನಲ್ಲಿ ಆಯ್ಕೆ ಮಾಡಿದ ದರ್ಜೆಯ ರೈಲು ಪ್ರಯಾಣ, ತ್ರೀ-ಸ್ಟಾರ್ ಹೋಟೆಲ್‌ಗಳಲ್ಲಿ ವಾಸ್ತವ್ಯ, ಸಂಪೂರ್ಣ ಸಸ್ಯಾಹಾರಿ ಊಟ, ಎಸಿ ಬಸ್‌ಗಳಲ್ಲಿ ಸ್ಥಳೀಯ ವೀಕ್ಷಣೆ ಸೌಲಭ್ಯ, ಪ್ರಯಾಣ ವಿಮೆ ಹಾಗೂ ಐಆರ್‌ಸಿಟಿಸಿ ಟೂರ್ ಮ್ಯಾನೇಜರ್‌ಗಳ ಮಾರ್ಗದರ್ಶನ ಒಳಗೊಂಡಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ : ಚಾಮರಾಜನಗರದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ.. ಬಿಸಿಲ ಬೇಗೆಗೆ ಕಂಗಾಲಾಗಿದ್ದ ಜನತೆ ಕೂಲ್ ಕೂಲ್!



















