ವಾಷಿಂಗ್ಟನ್ : ಕನ್ನಡಿಗ ಚಂದ್ರಮೌಳಿ ನಾಗಮಲ್ಲಯ್ಯ ಅವರ ತಲೆಕಡಿದು ಹತ್ಯೆಗೈದ ಘಟನೆ ಹಸಿರಾಗಿರುವಂತೆಯೇ ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ಮೂಲದ ಮೋಟೆಲ್ ಮಾಲೀಕನ ಹತ್ಯೆಯಾಗಿದೆ. 51 ವರ್ಷದ ಭಾರತೀಯ ಮೂಲದ ಮೋಟೆಲ್ ಮಾಲೀಕ ರಾಕೇಶ್ ಎಹಗಬನ್ ಅವರನ್ನು ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆಗೈದಿದ್ದಾನೆ.

ಯಾರದ್ದೋ ನಡುವೆ ನಡೆಯುತ್ತಿದ್ದ ಜಗಳವೊಂದನ್ನು ಪರಿಶೀಲಿಸಲು ಹೊರಬಂದ ರಾಕೇಶ್ ಅವರೇ ಕೊನೆಗೆ ಹತರಾಗಿದ್ದಾರೆ. “ಏನಾಯ್ತು, ಆರಾಮಾಗಿದ್ದೀರಿ ತಾನೇ?” ಎಂದು ವಿಚಾರಿಸಿದ್ದಕ್ಕೆ ದುಷ್ಕರ್ಮಿಯು ರಾಕೇಶ್ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕಳೆದ ಶುಕ್ರವಾರ ನಡೆದಿರುವ ಈ ಘಟನೆ ಈಗ ಬೆಳಕಿಗೆ ಬಂದಿದೆ.
ಮೋಟೆಲ್ ಹೊರಗೆ ಜೋರಾಗಿ ಗಲಾಟೆ ಆಗುತ್ತಿದ್ದುದನ್ನು ಕೇಳಿ ಹೊರಬಂದ ರಾಕೇಶ್, ಆರೋಪಿಯನ್ನು “Are you alright, bud?” (ಗೆಳೆಯಾ, ಆರಾಮವಾಗಿದ್ದೀರಿ ತಾನೇ?) ಎಂದು ಕೇಳಿದ್ದಾರೆ. ತಕ್ಷಣವೇ ಆರೋಪಿ ಬಂದೂಕು ಎತ್ತಿ ಅವರ ತಲೆಗೆ ಗುಂಡು ಹಾರಿಸಿದ್ದು, ರಾಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಭೀಕರ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೊದಲಿಗೆ ಮಹಿಳೆಯ ಮೇಲೆ ಗುಂಡಿನ ದಾಳಿ : ಆರೋಪಿಯನ್ನು 37 ವರ್ಷದ ಸ್ಟಾನ್ಲಿ ಯುಜೀನ್ ವೆಸ್ಟ್ ಎಂದು ಗುರುತಿಸಲಾಗಿದೆ. ಈತ ಸುಮಾರು ಎರಡು ವಾರಗಳಿಂದ ಮಹಿಳೆ ಮತ್ತು ಮಗುವಿನೊಂದಿಗೆ ಮೋಟೆಲ್‌ನಲ್ಲಿ ತಂಗಿದ್ದನು. ರಾಕೇಶ್ ಅವರನ್ನು ಹತ್ಯೆ ಮಾಡುವ ಸ್ವಲ್ಪ ಮೊದಲು, ಆತ ತನ್ನ ಜೊತೆಗಿದ್ದ ಮಹಿಳೆಯ ಮೇಲೆ ಮೋಟೆಲ್ ಪಾರ್ಕಿಂಗ್ ಸ್ಥಳದಲ್ಲಿ ಗುಂಡು ಹಾರಿಸಿದ್ದ.
ವರದಿಗಳ ಪ್ರಕಾರ, ಮಹಿಳೆ ತನ್ನ ಮಗುವಿನೊಂದಿಗೆ ಕಾರಿನಲ್ಲಿದ್ದಾಗ ವೆಸ್ಟ್ ಆಕೆಯ ಕುತ್ತಿಗೆಗೆ ಗುಂಡು ಹಾರಿಸಿದ್ದಾನೆ. ಗಾಯಗೊಂಡರೂ ಆ ಮಹಿಳೆ ಅಲ್ಲಿಂದ ಕಾರು ಚಲಾಯಿಸಿಕೊಂಡು ಸಮೀಪದ ಆಟೋ ಸೇವಾ ಕೇಂದ್ರಕ್ಕೆ ತಲುಪಿದ್ದಾರೆ. ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ವ್ಯಾನ್‌ನಲ್ಲಿ ಪರಾರಿ, ಪೊಲೀಸರೊಂದಿಗೆ ಗುಂಡಿನ ಚಕಮಕಿ : ರಾಕೇಶ್ ಹತ್ಯೆಯ ನಂತರ, ಆರೋಪಿ ವೆಸ್ಟ್ ಸಮೀಪದಲ್ಲೇ ನಿಲ್ಲಿಸಿದ್ದ ವ್ಯಾನ್ ಹತ್ತಿ ನಿಧಾನವಾಗಿ ಅಲ್ಲಿಂದ ಪರಾರಿಯಾಗಿದ್ದ. ಪೊಲೀಸರು ಆತನನ್ನು ಪಿಟ್ಸ್‌ಬರ್ಗ್‌ನ ಈಸ್ಟ್ ಹಿಲ್ಸ್ ಪ್ರದೇಶದಲ್ಲಿ ಪತ್ತೆಹಚ್ಚಿದ್ದಾರೆ. ಈ ವೇಳೆ ಪೊಲೀಸರು ಮತ್ತು ವೆಸ್ಟ್ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಒಬ್ಬ ಪೊಲೀಸ್ ಡಿಟೆಕ್ಟಿವ್ ಗಾಯಗೊಂಡಿದ್ದಾರೆ. ವೆಸ್ಟ್‌ಗೂ ಗುಂಡೇಟು ಬಿದ್ದಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ವೆಸ್ಟ್ ವಿರುದ್ಧ ಕ್ರಿಮಿನಲ್ ನರಹತ್ಯೆ, ಹತ್ಯೆ ಯತ್ನ ಮತ್ತು ನಿರ್ಲಕ್ಷ್ಯದಿಂದ ಅಪಾಯವನ್ನುಂಟುಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ಮುಂದುವರಿಸಿದ್ದಾರೆ.