ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾರತೀಯ ಹಾಕಿ ತಂಡ ತನ್ನ ಗೆಲುವಿನ ಅಭಿಯಾನ ಮುಂದುವರೆಸಿದೆ. ಈಗ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದೆ.
ಭಾರತ ತಂಡವು ಮಲೇಷ್ಯಾ ತಂಡವನ್ನು 8-1 ಅಂತರದಿಂದ ಬಗ್ಗು ಬಡಿದು ಸೆಮಿಫೈನಲ್ಗೆ ಪ್ರವೇಶಿಸಿದೆ. ಈ ಪಂದ್ಯದ ಮೊದಲ ಸುತ್ತಿನಲ್ಲೇ ಮೇಲುಗೈ ಸಾಧಿಸಿದ ಭಾರತ ತಂಡ ಏಕಪಕ್ಷೀಯವಾಗಿ ಗೆಲುವು ಸಾಧಿಸಿದೆ.
ಪಂದ್ಯದ 3ನೇ ನಿಮಿಷದಲ್ಲಿ ರಾಜ್ ಕುಮಾರ್ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಅರ್ಜೀತ್ ಸಿಂಗ್ ಹುಂಡಾಲ್ 6ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಜುಗರಾಜ್ ಸಿಂಗ್ 7ನೇ ಗೋಲು ಗಳಿಸಿದರು. ನಾಯನ ಹರ್ಮನ್ಪ್ರೀತ್ ಸಿಂಗ್ ಭಾರತಕ್ಕೆ ಮೂರನೇ ಯಶಸ್ಸು ತಂದುಕೊಟ್ಟರೆ, 25ನೇ ಮತ್ತು 33ನೇ ನಿಮಿಷಗಳಲ್ಲಿ ಬ್ಯಾಕ್ ಟು ಬ್ಯಾಕ್ ಗೋಲು ಬಾರಿಸುವ ಮೂಲಕ ರಾಜ್ ಕುಮಾರ್ ಹ್ಯಾಟ್ರಿಕ್ ಸಾಧನೆಗೈದು, ಭಾರತದ ಜಯದ ಅಂತರ ಹಿಗ್ಗಿಸಿದರು.
39ನೇ ನಿಮಿಷದಲ್ಲಿ ಅರ್ಜೀತ್ ಸಿಂಗ್ ಹುಂಡಾಲ್ 2ನೇ ಗೋಲು ಗಳಿಸಿದರು. ಉತ್ತಮ್ ಸಿಂಗ್ ಅವರ ಹಾಕಿ ಸ್ಟಿಕ್ ನೊಂದಿಗೆ 40ನೇ ನಿಮಿಷದಲ್ಲಿ ಗೋಲು ದಾಖಲಾಯಿತು. ಈ ಮೂಲಕ ಮಲೇಷ್ಯಾ ವಿರುದ್ಧ 8-1 ಅಂತರದಿಂದ ಗೆದ್ದು ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿತು.
ಮೊದಲ ಪಂದ್ಯದಲ್ಲಿ ಚೀನಾ ತಂಡವನ್ನು 3-0 ಅಂತರದಿಂದ ಸೋಲಿಸಿದ್ದ ಭಾರತ ತಂಡ, ಜಪಾನ್ ವಿರುದ್ಧದ ಪಂದ್ಯವನ್ನು 5-1 ಅಂತರದಿಂದ ಗೆಲುವು ಸಾಧಿಸಿತು. ಈಗ ಮಲೇಷ್ಯಾ ತಂಡವನ್ನು 8-1 ಅಂತರದಿಂದ ಸೋಲಿಸಿತು. ಇದರೊಂದಿಗೆ 9 ಅಂಕಗಳನ್ನು ಗಳಿಸಿದ ಭಾರತ ಸೆಮಿಸ್ ಗೆ ಎಂಟ್ರಿ ಕೊಟ್ಟಿತು.
ಸೆಮಿಫೈನಲ್ ಗೂ ಮುನ್ನ ಭಾರತ ತಂಡ ಶತೃ ರಾಷ್ಟ್ರ ಪಾಕ್ ವಿರುದ್ಧ ಸೆಣಸಾಟ ನಡೆಸಲಿದೆ. ಸೆಮಿಫೈನಲ್ ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಹೋರಾಡಲಿದೆ.