ಅಮೆರಿಕ ಮೂಲದ ಮಹಿಳೆಗೆ ಭಾರತೀಯ ಸೈಬರ್ ವಂಚಕರು ವಂಚಿಸಿರುವ ಘಟನೆ ನಡೆದಿದೆ.
ಅಮೆರಿಕ ಮೂಲದ ಲಿಸಾ ರಾತ್ ವಂಚನೆಗೆ ಒಳಗಾದ ಮಹಿಳೆ. ಅವರು ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾರೆ. ಇತ್ತೀಚೆಗೆ ಅವರ ಲ್ಯಾಪ್ ಟಾಪ್ ಹ್ಯಾಕ್ ಆಗಿತ್ತು. ಹ್ಯಾಕರ್ ಗಳುಲ ಮಹಿಳೆಯ ಲ್ಯಾಪ್ ಟಾಪ್ ತಮ್ಮ ನಂಬರ್ ಮೂಡುವಂತೆ ಮಾಡಿದ್ದಾರೆ. ಆಗ ಮಹಿಳೆ ಆ ನಂಬರ್ ಗೆ ಕರೆ ಮಾಡಿದ್ದಾರೆ. ಹ್ಯಾಕರ್ ಗಳು ತಮ್ಮನ್ನು ತಾವು ಮೈಕ್ರೋಸಾಫ್ಟ್ ಸಂಸ್ಥೆಯ ಉದ್ಯೋಗಿಗಳು ಎಂದು ಹೇಳಿಕೊಂಡಿದ್ದಾರೆ. ಆಗ ಬ್ಯಾಂಕ್ ಖಾತೆಗಳಲ್ಲಿ ಇಟ್ಟಿರುವ ಸುಮಾರು 4 ಮಿಲಿಯನ್ ಡಾಲರ್ ಹಣವು ಸುರಕ್ಷಿತವಾಗಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಹ್ಯಾಕರ್ ಗಳ ಮಾತನ್ನು ನಂಬಿದ ಲಿಸಾ ರಾತ್, ಅವುಗಳನ್ನು ತೆರವು ಮಾಡುವ ಮನವಿ ಮಾಡಿದ್ದಾರೆ. ಆಗ ವಂಚಕರು ತಾವು ಒಂದು ಸುರಕ್ಷಿತ ಅಕೌಂಟ್ ನೀಡುವುದಾಗಿ ಭರವಸೆ ನೀಡಿ, ಮಹಿಳೆಯ ಹಣವನ್ನು ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಅದು ವಂಚಕರು ಸೃಷ್ಟಿ ಮಾಡಿದ್ದ ಕ್ರಿಪ್ಟೋ ಕರೆನ್ಸಿ ಅಕೌಂಟ್ ಆಗಿತ್ತು. ಈ ಅಕೌಂಟ್‌ಗೆ ಲಿಸಾ ರಾತ್ ಅವರು ತಮ್ಮಲ್ಲಿದ್ದ ಎಲ್ಲ ಹಣ ವರ್ಗಾವಣೆ ಮಾಡಿದ್ದಾರೆ.
ಒಂದಿಷ್ಟು ದಿನಗಳ ನಂತರ ಮಹಿಳೆ ಒಕೆ ಕಾಯಿನ್’ ಖಾತೆಯನ್ನು ಪರಿಶೀಲಿಸಿದಾಗ ಅದರಲ್ಲಿ ಹಣವೇ ಇಲ್ಲ. ಆನಂತರ ಅಲ್ಲಿದ್ದ ಹಣವರ್ಗಾವಣೆಯಾಗಿದ್ದ ಮಾಹಿತಿ ಸಿಕ್ಕಿತ್ತು. ಕೂಡಲೇ ಅಮೆರಿಕದ ಪೊಲೀಸರು ಹಾಗೂ ಸೈಬರ್ ಕ್ರೈಂ ವಿಭಾಗ ಸಂಪರ್ಕಿಸಿದ್ದಾರೆ. ಆಗ ಅವರು ಮೋಸ ಹೋಗಿದ್ದು ಬೆಳಕಿಗೆ ಬಂದಿದ್ದು, ಭಾರತೀಯ ಸೈಬರ್ ವಂಚಕರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಅಮೆರಿಕದ ತನಿಖಾ ತಂಡ ಭಾರತದ ತನಿಖಾ ತಂಡಗಳಿಗೆ ಪ್ರಕರಣ ಹಸ್ತಾಂತರ ಮಾಡಲಾಗಿದ್ದು, ಸದ್ಯ ಭಾರತೀಯ ಸಿಬಿಐ ಅಧಿಕಾರಿಗಳು ಐವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳು ಅಮೆರಿಕ ಮಹಿಳೆಯ ಖಾತೆಯಿಂದ ತಮ್ಮ ಖಾತೆಗೆ ವರ್ಗಾಯಿಸಿಕೊಂಡ ಹಣವನ್ನು ಬಿಟ್ ಕಾಯಿನ್ ಆಗಿ ಪರಿವರ್ತನೆ ಮಾಡಿಕೊಂಡಿದ್ದರು. ನಂತರ ಇವುಗಳನ್ನು ಸರಿತಾ ಗುಪ್ತಾ ಹಾಗೂ ಪ್ರಫುಲ್ ಗುಪ್ತಾ ಅವರ ಕ್ರಿಪ್ಟೋ ಕರೆನ್ಸಿ ಖಾತೆಯ ವ್ಯಾಲೆಟ್‌ಗಳಿಗೆ ವರ್ಗಾಯಿಸಿಕೊಂಡಿದ್ದರು. ಹೀಗೆ ಒಟ್ಟು 2.27 ಕೋಟಿ ರೂ. ಹಣವನ್ನು ನಗದಾಗಿ ಪರಿವರ್ತನೆ ಮಾಡಿಕೊಂಡು ಹಣ ಖರ್ಚು ಮಾಡಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಕ್ರಿಪ್ಟೋ ಕರೆನ್ಸಿ ವ್ಯಾಲೆಟ್ ಗಳಿಗೆ ಬಿಟ್ ಕಾಯಿನ್ ಜಮೆ ಆದ ನಂತರ ಆರೋಪಿಗಳು ಮಾರಾಟಕ್ಕೆ ಇಟ್ಟಿದ್ದರು. ಆಗ ತಮಗೆ ಸಿಕ್ಕ ಹಣವನ್ನು ಬೇನಾಮಿ ಹೆಸರಲ್ಲಿ ಮಾಡಿಕೊಂಡಿದ್ದ 95 ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದ್ದರು. ನಂತರ ಹಣ ಪಡೆದುಕೊಂಡಿದ್ದರು ಎಂಬುವುದು ಬಯಲಿಗೆ ಬಂದಿದೆ.