ಭಾರತ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಪ್ರಸ್ತುತ ತಮ್ಮ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಇಂಗ್ಲೆಂಡ್ ಪ್ರವಾಸದಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಗಿಲ್, ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ಸುನಿಲ್ ಗವಾಸ್ಕರ್ ಅವರ ಸುದೀರ್ಘ ಕಾಲದ ದಾಖಲೆಗಳನ್ನು ಮುರಿದು ನೂತನ ಮೈಲುಗಲ್ಲು ತಲುಪಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪ್ರಸಕ್ತ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ಶುಭಮನ್ ಗಿಲ್, ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಪ್ರಥಮ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿ ಅಬ್ಬರಿಸಿದ್ದರು. ಆ ನಂತರವೂ ನಿಲ್ಲದ ಗಿಲ್, ದ್ವಿತೀಯ ಇನ್ನಿಂಗ್ಸ್‌ನಲ್ಲಿಯೂ ಶತಕ ಗಳಿಸುವ ಮೂಲಕ ತಮ್ಮ ರನ್‌ಗಳಿಕೆಯನ್ನು ಮುಂದುವರಿಸಿದರು. ಈ ಸರಣಿಯಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳಿಂದಲೇ ಗಿಲ್ 500ಕ್ಕೂ ಹೆಚ್ಚು ರನ್‌ಗಳನ್ನು ದಾಖಲಿಸಿ ಹೊಸ ಇತಿಹಾಸ ಬರೆದಿದ್ದಾರೆ.
ಕರುಣ್ ನಾಯರ್ ವಿಕೆಟ್ ಒಪ್ಪಿಸಿದ ಬಳಿಕ ಕ್ರೀಸ್‌ಗೆ ಬಂದ ಶುಭಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದರು. ಅವರು ಕೇವಲ 129 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಪ್ರಥಮ ಇನ್ನಿಂಗ್ಸ್‌ನಲ್ಲಿ 269 ರನ್ ಗಳಿಸಿದ್ದ ಗಿಲ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 162 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 13 ಬೌಂಡರಿಗಳನ್ನೊಳಗೊಂಡ 161 ರನ್‌ಗಳನ್ನು ಕಲೆ ಹಾಕಿದರು. ಈ ಟೆಸ್ಟ್ ಸರಣಿಯ ನಾಲ್ಕು ಇನ್ನಿಂಗ್ಸ್‌ಗಳಿಂದ ಗಿಲ್ ಒಟ್ಟು 585 ರನ್‌ಗಳನ್ನು ಗಳಿಸಿದ್ದಾರೆ.

ಕೊಹ್ಲಿ ದಾಖಲೆ ಉಡೀಸ್, ನಾಯಕನಾಗಿ ಗಿಲ್ ಅಬ್ಬರ
ಭಾರತ ಟೆಸ್ಟ್ ತಂಡದ ನಾಯಕನಾಗಿ ತಮ್ಮ ಚೊಚ್ಚಲ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಶುಭಮನ್ ಗಿಲ್, ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದಿದ್ದಾರೆ. ಕೊಹ್ಲಿ 2014-15ರ ಆಸ್ಟ್ರೇಲಿಯಾ ಪ್ರವಾಸದಲ್ಲಿ 449 ರನ್‌ಗಳನ್ನು ಕಲೆ ಹಾಕಿದ್ದರು. ಇದೀಗ ಗಿಲ್ ಕೇವಲ ಎರಡೇ ಟೆಸ್ಟ್ ಪಂದ್ಯಗಳಲ್ಲಿ 585 ರನ್ ಗಳಿಸಿ ಕೊಹ್ಲಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.
ಏಕೈಕ ಟೆಸ್ಟ್ ಪಂದ್ಯದಲ್ಲಿ 300 ರನ್ ಗಳಿಸಿದ ಭಾರತ ತಂಡದ ಮೊದಲ ನಾಯಕ ಎಂಬ ದಾಖಲೆಯನ್ನು ಸಹ ಶುಭಮನ್ ಗಿಲ್ ಬರೆದಿದ್ದಾರೆ. 2017ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಎರಡೂ ಇನ್ನಿಂಗ್ಸ್‌ಗಳಿಂದ 293 ರನ್ ಗಳಿಸಿದ್ದರು. ಈಗ ಗಿಲ್ ಆ ದಾಖಲೆಯನ್ನೂ ಮೀರಿ ನಿಂತಿದ್ದಾರೆ.
ಗವಾಸ್ಕರ್ ದಾಖಲೆಯನ್ನೂ ದಾಟಿದ ಗಿಲ್!
ಈ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಗಿಲ್ (587 ರನ್) ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಆ ಮೂಲಕ 542 ರನ್ ಗಳಿಸಿದ್ದ ಸುನಿಲ್ ಗವಾಸ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ (602 ರನ್) ಅಗ್ರ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ (593 ರನ್) ಎರಡನೇ ಸ್ಥಾನದಲ್ಲಿದ್ದಾರೆ. ಗಿಲ್ ಮುಂದಿನ ಪಂದ್ಯಗಳಲ್ಲಿ ಈ ಇಬ್ಬರನ್ನೂ ಮೀರಿಸಿ ಹೊಸ ದಾಖಲೆ ನಿರ್ಮಿಸುವ ಸಾಧ್ಯತೆ ಇದೆ.
ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಭಾರತೀಯ ನಾಯಕರು:
- ಸುನಿಲ್ ಗವಾಸ್ಕರ್ vs ವೆಸ್ಟ್ ಇಂಡೀಸ್, ಕೋಲ್ಕತ್ತಾ, 1978
- ವಿರಾಟ್ ಕೊಹ್ಲಿ vs ಆಸ್ಟ್ರೇಲಿಯಾ, ಅಡಿಲೇಡ್, 2014
- ಶುಭಮನ್ ಗಿಲ್ vs ಇಂಗ್ಲೆಂಡ್, ಎಡ್ಜ್‌ಬಾಸ್ಟನ್, 2025
ಶುಭಮನ್ ಗಿಲ್ ಮತ್ತೊಂದು ಪ್ರಮುಖ ದಾಖಲೆಯನ್ನು ಬರೆದಿದ್ದಾರೆ. ಈ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಿಂದ ಗಿಲ್ 430 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಏಕೈಕ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಹಾಗೂ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ಹಿಂದೆ 344 ರನ್ ಗಳಿಸಿದ್ದ ಸುನಿಲ್ ಗವಾಸ್ಕರ್ ಅವರನ್ನು ಗಿಲ್ ಹಿಂದಿಕ್ಕಿದ್ದಾರೆ.
ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್: - 430 – ಶುಭಮನ್ ಗಿಲ್ vs ಇಂಗ್ಲೆಂಡ್, ಎಡ್ಜ್‌ಬಾಸ್ಟನ್, 2025
- 344 – ಸುನಿಲ್ ಗವಾಸ್ಕರ್ vs ವೆಸ್ಟ್ ಇಂಡೀಸ್, ಪೋರ್ಟ್ ಆಫ್ ಸ್ಪೇನ್, 1971
- 340 – ವಿವಿಎಸ್ ಲಕ್ಷ್ಮಣ್ vs ಆಸ್ಟ್ರೇಲಿಯಾ, ಕೋಲ್ಕತ್ತಾ, 2001
- 330 – ಸೌರವ್ ಗಂಗೂಲಿ vs ಪಾಕಿಸ್ತಾನ, ಬೆಂಗಳೂರು, 2007
- 319 – ವೀರೇಂದ್ರ ಸೆಹ್ವಾಗ್ vs ದಕ್ಷಿಣ ಆಫ್ರಿಕಾ, ಚೆನ್ನೈ, 2008
- 309 – ವೀರೇಂದ್ರ ಸೆಹ್ವಾಗ್ vs ಪಾಕಿಸ್ತಾನ, ಮುಲ್ತಾನ್, 2004