ನವದೆಹಲಿ: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಯೋತ್ಪಾದನೆಯನ್ನು ನಿಲ್ಲಿಸದಿದ್ದರೆ ಭೂಪಟದಿಂದಲೇ ಪಾಕ್ ಮಾಯವಾಗುವಂತೆ ಮಾಡಲಾಗುವುದು ಅಂತೆಯೇ ಭಾರತವು ಆಪರೇಷನ್ ಸಿಂಧೂರ್ 1.0 ಸಮಯದಲ್ಲಿ ತೋರಿಸಿದಂತೆ ಮುಂದೆಯೂ ತೋರಿಸುತ್ತದೆ ಎಂದು ಘೋಷಿಸಿದ್ದಾರೆ.
ಪಾಕಿಸ್ತಾನದಲ್ಲಿ 9 ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸುವಲ್ಲಿ ಮತ್ತು 100ಕ್ಕೂ ಹೆಚ್ಚು ಉಗ್ರಗಾಮಿಗಳ ಹತ್ಯೆಗೆ ಕಾರಣವಾದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಯಶಸ್ಸನ್ನು ಅವರು ಈ ವೇಳೆ ಎತ್ತಿ ತೋರಿಸಿದರು.
ಸೇನಾ ಮುಖ್ಯಸ್ಥ ಜನರಲ್ ದ್ವಿವೇದಿ ಇಂದು ಘಡ್ಶಾನಾ ಗ್ರಾಮದಲ್ಲಿ ಭಾರತೀಯ ಸೇನಾ ಕಂಟೋನ್ಮೆಂಟ್‌ನಲ್ಲಿ ಮಾತನಾಡಿ, ಪಾಕಿಸ್ತಾನ ಜಾಗತಿಕ ಭೂಪಟದಲ್ಲಿ ಉಳಿಯಬೇಕೆಂದರೆ ಭಾರತದೊಳಗೆ ಭಯೋತ್ಪಾದನೆಯನ್ನು ಪ್ರಾಯೋಜಿಸುವುದನ್ನು ನಿಲ್ಲಿಸಬೇಕು ಎಂದು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ತೋರಿಸಿದ ಅದೇ ಸಂಯಮವನ್ನು ಮುಂದೆಯೂ ತೋರಿಸುವುದಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.