ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯವನ್ನು ಭಾರತೀಯ ಮಹಿಳಾ ತಂಡ ಗೆದ್ದಿದೆ.
ಈಗಾಗಲೇ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದ್ದ ಭಾರತೀಯ ವನಿತೆಯರ ತಂಡ ಏಕದಿನ ಪಂದ್ಯದಲ್ಲೂ ಗೆಲುವಿನ ಅಭಿಯಾನ ಮುಂದುವರೆಸಿದೆ. ಮೊದಲ ಪಂದ್ಯದಲ್ಲಿ ನಾಯಕಿ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತೀಯ ತಂಡ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು 211 ರನ್ ಗಳಿಂದ ಏಕಪಕ್ಷೀಯವಾಗಿ ಸೋಲಿಸಿತು.
ಸ್ಮೃತಿ ಮಂಧಾನ ಅವರ 91 ರನ್ ಗಳ ಕೊಡುಗೆಯ ಪರಿಣಾಮ ಭಾರತೀಯ ತಂಡ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 314 ರನ್ ಗಳಿಸಿದ್ದು. ಕಠಿಣ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ಕೇವಲ 103 ರನ್ ಗಳಿಗೆ ಸರ್ವಪತನ ಕಂಡ ಹೀನಾಯ ಸೋಲು ಕಂಡಿತು.
ಮೊದಲು ಬ್ಯಾಟ್ ಮಾಡಿದ ಭಾರತೀಯ ತಂಡಕ್ಕೆ ಆರಂಭಿಕ ಆಟಗಾರರು ಉತ್ತಮ ಸಾಥ್ ನೀಡಿದರು. ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿದ ಯುವ ಬ್ಯಾಟರ್ ಪ್ರತೀಕಾ ರಾವಲ್ ಹಾಗೂ ಸ್ಮೃತಿ ಮಂಧಾನ ಜೋಡಿ ಮೊದಲ ವಿಕೆಟ್ ಗೆ 110 ರನ್ ಗಳ ಕಾಣಿಕೆ ನೀಡಿತು.
ಮಂಧಾನ ಶತಕ ಪೂರೈಸಲು ಸಾಧ್ಯವಾಗದೆ 91 ರನ್ ಗಳಿಸಿ ಔಟಾದರು. ನಂತರ ನಾಯಕಿ ಹರ್ಮನ್ ಪ್ರೀತ್ ಕೌರ್, ರಿಚಾ ಘೋಷ್ ಮತ್ತು ಜೆಮಿಮಾ ರೋಡ್ರಿಗಸ್ ಮಧ್ಯಮ ಕ್ರಮಾಂಕದಲ್ಲಿ ವೇಗದ ಇನ್ನಿಂಗ್ಸ್ ಆಡಿದರು. ಗುರಿ ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್ ಕೇವಲ 11 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಬೌಲರ್ ರೇಣುಕಾ ವಿಂಡೀಸ್ ಆಟಗಾರರಿಗೆ ದೊಡ್ಡ ಶಾಕ್ ನೀಡಿದರು.ವಿಂಡೀಸ್ ತಂಡ ತೀವ್ರ ಕುಸಿತ ಕಂಡು ಕೇವಲ 66 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡಿತು. ಹೀಗಾಗಿ ರೇಣುಕಾ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.