ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನವೇ ಮೊದಲ ಪದಕವಾಗಿ ಒಲಿದು ಬಂದಿದೆ.
ಮಹಿಳೆಯರ 10 ಮೀಟರ್ ಏರ್ ರೈಫಲ್ (SH1) ವಿಭಾಗದಲ್ಲಿ ಅವನಿ ಲೇಖರಾ ದಾಖಲೆ ಬರೆದಿದ್ದಾರೆ. 249.7 ಅಂಕ ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಲೇಖರಾ ಮುತ್ತಿಕ್ಕಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್ ನಲ್ಲಿ ನಿರ್ಮಿಸಿದ್ದ ತಮ್ಮದೇ ದಾಖಲೆಯನ್ನು ಅವನಿ ಮುರಿದಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಅವನಿ ಒಟ್ಟು 249.6 ಅಂಕ ಕಲೆಹಾಕಿ ಚಿನ್ನದ ಪದಕ ಗೆದ್ದಿದ್ದರು. ಈಗ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ನಲ್ಲಿ 249.7 ಅಂಕ ಗಳಿಸುವ ಮೂಲಕ ಚಿನ್ನ ಗೆದ್ದಿರುವ ಅವನಿ ತಮ್ಮದೇ ದಾಖಲೆ ಅಳಿಸಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ ಸತತ ಎರಡನೇ ಬಾರಿಗೆ ಚಿನ್ನದ ಪದಕ ಗೆದ್ದ ಸಾಧನೆಯನ್ನು ಅವನಿ ಮಾಡಿದ್ದಾರೆ.
ಅಲ್ಲದೇ, ಈ ಸ್ಪರ್ಧೆಯಲ್ಲಿಯೇ ಭಾರತದ ಮತ್ತೋರ್ವ ಪ್ಯಾರಾ ಶೂಟರ್ ಮೋನಾ ಅಗರ್ವಾಲ್ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಹೀಗಾಗಿ ಭಾರತಕ್ಕೆ ಒಂದೇ ಕ್ರೀಡೆಯಲ್ಲಿ ಸದ್ಯ ಒಂದು ಚಿನ್ನ, ಒಂದು ಕಂಚು ಬಂದಿದೆ. ಈ ಮೂಲಕ ಪದಕ ಬೇಟೆಯನ್ನು ಭಾರತೀಯ ಆಟಗಾರರು ಆರಂಭಿಸಿದ್ದಾರೆ.