ಇಸ್ಲಾಮಾಬಾದ್: ಆಪರೇಷನ್ ಸಿಂದೂರದಲ್ಲಿ ಮುಟ್ಟಿ ನೋಡಿಕೊಳ್ಳುವಂತೆ ಹೊಡೆಸಿಕೊಂಡಿರುವ ಪಾಕಿಸ್ತಾನ, ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ವರ್ತಿಸುತ್ತಿದೆ. ಭಾರತದ ಸೇನಾ ಮುಖ್ಯಸ್ಥರು, ವಾಯುಪಡೆ ಮುಖ್ಯಸ್ಥರು ಹಾಗೂ ರಾಜಕೀಯ ನಾಯಕರು ನೀಡುತ್ತಿರುವ ಹೇಳಿಕೆಗಳಿಂದ ಕೆರಳಿ ಕೆಂಡವಾಗಿರುವ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್, “ಭಾರತವನ್ನು ಅದರ ಯುದ್ಧ ವಿಮಾನಗಳ ಅವಶೇಷಗಳಡಿ ಹೂಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
‘ಆಪರೇಷನ್ ಸಿಂದೂರ’ದ ಬಳಿಕ ಭಾರತದ ನಾಯಕರು ನೀಡುತ್ತಿರುವ ಹೇಳಿಕೆಗಳ ಕುರಿತು ‘ಎಕ್ಸ್’ (ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಆಸಿಫ್, ಇದು ತಮ್ಮ ಕಳೆದುಹೋದ ವಿಶ್ವಾಸಾರ್ಹತೆಯನ್ನು ಮರಳಿ ಪಡೆಯುವ ವಿಫಲ ಯತ್ನ ಎಂದು ಟೀಕಿಸಿದ್ದಾರೆ. ಆಂತರಿಕ ಹಿನ್ನಡೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಭಾರತ ಸರ್ಕಾರವು ಉದ್ವಿಗ್ನತೆಯನ್ನು ಸೃಷ್ಟಿಸುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
ಅಲ್ಲಾಹನ ಹೆಸರಿನಲ್ಲಿ ಸೃಷ್ಟಿಯಾದ ದೇಶ:
“ಪಾಕಿಸ್ತಾನವು ಅಲ್ಲಾಹನ ಹೆಸರಿನಲ್ಲಿ ನಿರ್ಮಿತವಾದ ದೇಶ. ನಮ್ಮ ರಕ್ಷಕರು ಅಲ್ಲಾಹನ ಸೈನಿಕರು. ಈ ಬಾರಿ, ಇನ್ಶಾ ಅಲ್ಲಾ, ಭಾರತವನ್ನು ಅದರ ವಿಮಾನಗಳ ಅವಶೇಷಗಳಡಿಯಲ್ಲಿ ಸಮಾಧಿ ಮಾಡಲಾಗುವುದು. ಅಲ್ಲಾಹು ಅಕ್ಬರ್,” ಎಂದು ಆಸಿಫ್ ಪ್ರಚೋದನಕಾರಿ ಪೋಸ್ಟ್ ಮಾಡಿದ್ದಾರೆ.
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತವು ಮೇ 7 ರಂದು ‘ಆಪರೇಷನ್ ಸಿಂದೂರ’ ನಡೆಸಿ, 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆಗೈದು, ಉಗ್ರರ ಮೂಲಸೌಕರ್ಯವನ್ನು ನಾಶಪಡಿಸಿತ್ತು. ಪಾಕಿಸ್ತಾನದ ಹಲವಾರು ಡ್ರೋನ್‌ಗಳು ಮತ್ತು ಯುದ್ಧ ವಿಮಾನಗಳನ್ನು ಭಾರತ ನಾಶಪಡಿಸಿದ್ದು, ಪಾಕಿಸ್ತಾನದ ಸೇನಾ, ವಾಯುನೆಲೆಗಳಿಗೆ ಹಾನಿಯಾಗಿರುವುದನ್ನು ಉಪಗ್ರಹ ಚಿತ್ರಗಳು ಸಾಬೀತುಪಡಿಸಿದ್ದವು. ಆದರೂ, ಪಾಕಿಸ್ತಾನವು ಯಾವುದೇ ಪುರಾವೆಗಳಿಲ್ಲದೆ ತಾನೇ ಗೆದ್ದಿರುವುದಾಗಿ ಪದೇ ಪದೇ ಹೇಳಿಕೊಳ್ಳುತ್ತಿದೆ.
“ಭಾರತೀಯ ಸೇನಾ ಮುಖ್ಯಸ್ಥರ ಎಚ್ಚರಿಕೆ”
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಪಾಕಿಸ್ತಾನಕ್ಕೆ ನೀಡಿದ ಎಚ್ಚರಿಕೆಯ ಬೆನ್ನಲ್ಲೇ ಖ್ವಾಜಾ ಆಸಿಫ್ ಅವರ ಈ ಹೇಳಿಕೆ ಹೊರಬಿದ್ದಿದೆ. “ಪಾಕಿಸ್ತಾನವು ಭೂಪಟದಲ್ಲಿ ಉಳಿಯಲು ಬಯಸಿದರೆ, ಅದು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸಬೇಕು” ಎಂದು ದ್ವಿವೇದಿ ಶುಕ್ರವಾರ ಎಚ್ಚರಿಸಿದ್ದರು. ‘ಆಪರೇಷನ್ ಸಿಂದೂರ 1.0’ ನಲ್ಲಿ ತೋರಿದ ಸಂಯಮವನ್ನು ಭಾರತ ಇನ್ನು ಮುಂದೆ ತೋರಿಸುವುದಿಲ್ಲ ಮತ್ತು ಭವಿಷ್ಯದ ಪ್ರತೀಕಾರವು ತೀವ್ರವಾಗಿರುತ್ತದೆ ಎಂದು ಅವರು ಹೇಳಿದ್ದರು.
ಇದಕ್ಕೂ ಮುನ್ನ, ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು, ‘ಆಪರೇಷನ್ ಸಿಂದೂರ’ ಸಂದರ್ಭದಲ್ಲಿ ಭಾರತವು ಎಫ್-16 ಮತ್ತು ಜೆ-17 ಜೆಟ್‌ಗಳು ಸೇರಿದಂತೆ 12-13 ಹೈಟೆಕ್ ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಬಹಿರಂಗಪಡಿಸಿದ್ದರು. ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂಬ ಪಾಕಿಸ್ತಾನದ ಹೇಳಿಕೆಗಳನ್ನು “ಮನೋಹರ ಕಥೆಗಳು” ಎಂದು ತಳ್ಳಿಹಾಕಿದ್ದ ಅವರು, ತನ್ನ ಹೇಳಿಕೆಗಳನ್ನು ಸಾಬೀತುಪಡಿಸುವಂತೆ ಪಾಕಿಸ್ತಾನಕ್ಕೆ ಸವಾಲು ಹಾಕಿದ್ದರು.
“ಭಾರತದ ಗುಪ್ತಚರ ಇಲಾಖೆಯ ಪ್ರತಿಕ್ರಿಯೆ”
ಖ್ವಾಜಾ ಆಸಿಫ್ ಅವರ ಧರ್ಮ ಮತ್ತು ಹಿಂಸೆಯನ್ನು ಪ್ರಚೋದಿಸುವ ಹೇಳಿಕೆಗಳು “ಬೇಜವಾಬ್ದಾರಿಯುತವಾಗಿದ್ದು, ಅವರ ಉಗ್ರಗಾಮಿ ಮನಸ್ಥಿತಿಯನ್ನು ಬಹಿರಂಗಪಡಿಸುತ್ತವೆ” ಎಂದು ಭಾರತದ ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಯಾವುದೇ ದುಸ್ಸಾಹಸಕ್ಕೆ ನಿರ್ಣಾಯಕ, ದಂಡನೀಯ ಪ್ರತಿಕ್ರಿಯೆ ನೀಡಲಾಗುವುದು ಎಂದೂ ಅವು ಎಚ್ಚರಿಸಿವೆ. ಪಾಕಿಸ್ತಾನದ ಕುಸಿಯುತ್ತಿರುವ ಆರ್ಥಿಕತೆ, ಆಂತರಿಕ ಅಶಾಂತಿ ಮತ್ತು ವಿಶ್ವಾಸಾರ್ಹತೆಯಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಪಾಕ್ ನಾಯಕತ್ವವು ಹತಾಶೆಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದೆ ಎಂದು ಮೂಲಗಳು ಹೇಳಿವೆ.