ನವದೆಹಲಿ: ರಾಜಕೀಯ ಮತ್ತು ಭದ್ರತಾ ಸವಾಲುಗಳ ಸುಳಿಯಲ್ಲಿ ಸಿಲುಕಿರುವ ಭಾರತ-ಪಾಕಿಸ್ತಾನ ಸಂಬಂಧಗಳು, ಇದೀಗ ಮತ್ತೊಮ್ಮೆ ಕ್ರಿಕೆಟ್ ಅಂಗಳದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿವೆ! ‘ಆಪರೇಷನ್ ಸಿಂದೂರ್’ ಎಂಬ ಮಿಲಿಟರಿ ಕಾರ್ಯಾಚರಣೆಯ ನಂತರ ಉಭಯ ದೇಶಗಳ ನಡುವೆ ಹೆಚ್ಚಿದ ಉದ್ವಿಗ್ನತೆಯ ನಡುವೆಯೇ, ಜುಲೈ 20 ರಂದು ಇಂಗ್ಲೆಂಡ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) ಪ್ರದರ್ಶನ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟ್ ದಿಗ್ಗಜರು ಮುಖಾಮುಖಿಯಾಗಲಿದ್ದಾರೆ.
ಮೇ 2025 ರಲ್ಲಿ ನಡೆದ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯು ಭಾರತ-ಪಾಕ್ ಸಂಬಂಧಗಳಲ್ಲಿ ದೊಡ್ಡ ಬಿರುಕು ಮೂಡಿಸಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹೇಯ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿ ಮಿಂಚಿನ ದಾಳಿ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಒಂಬತ್ತು ಭಯೋತ್ಪಾದಕ ನೆಲೆಗಳು ಧ್ವಂಸಗೊಂಡು, ಸುಮಾರು 80ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯ ತರುವಾಯ, ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿದ್ದು, ಇದರಿಂದಾಗಿ ಪ್ರಮುಖ ಕ್ರೀಡಾಕೂಟಗಳು, ವಿಶೇಷವಾಗಿ ಐಪಿಎಲ್ ಪಂದ್ಯಗಳು ಸಹ ಬೇರೆಡೆಗೆ ಸ್ಥಳಾಂತರಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಕ್ರಿಕೆಟ್‌ನಂತಹ ಜನಪ್ರಿಯ ಕ್ರೀಡೆಯ ಮೂಲಕ ಮತ್ತೊಮ್ಮೆ ಒಂದಾಗುವ ಪ್ರಯತ್ನವು ಎಲ್ಲರ ಗಮನ ಸೆಳೆದಿದೆ.
ಎಡ್ಜ್‌ಬಾಸ್ಟನ್‌ನಲ್ಲಿ ‘ಲೆಜೆಂಡ್ಸ್’ಗಳ ಅಖಾಡ
ಜುಲೈ 20 ರಂದು ಎಡ್ಜ್‌ಬಾಸ್ಟನ್‌ನ ಐತಿಹಾಸಿಕ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪ್ರದರ್ಶನ ಪಂದ್ಯಕ್ಕೆ ಕ್ರಿಕೆಟ್ ದಿಗ್ಗಜರ ದಂಡು ಆಗಮಿಸಲಿದೆ. ಭಾರತ ತಂಡದ ಪರವಾಗಿ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್, ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್, ಎಡಗೈ ಬ್ಯಾಟಿಂಗ್ ಸೆನ್ಸೇಷನ್ ಸುರೇಶ್ ರೈನಾ ಮತ್ತು ವೇಗದ ಬೌಲಿಂಗ್ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕಣಕ್ಕಿಳಿಯಲಿದ್ದಾರೆ. ಪಾಕಿಸ್ತಾನ ತಂಡದ ಪರವಾಗಿ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಉಪಸ್ಥಿತಿಯು ಪಂದ್ಯಕ್ಕೆ ಮತ್ತಷ್ಟು ಕಾವೇರಿಸಲಿದೆ. ಭಾರತದ ಬಗ್ಗೆ ಅಫ್ರಿದಿ ಮಾಡಿದ ಕೆಲವು ಕಟುವಾದ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗುರಿಯಾಗಿದ್ದವು.
ಶಾಹಿದ್ ಅಫ್ರಿದಿ ಅವರ ವಿವಾದಾತ್ಮಕ ಹೇಳಿಕೆಗಳು: ಬೆಂಕಿಗೆ ತುಪ್ಪ ಸುರಿದಂತೆ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಶಾಹಿದ್ ಅಫ್ರಿದಿ ನೀಡಿದ ಕೆಲವು ಹೇಳಿಕೆಗಳು, ಈಗಾಗಲೇ ಹದಗೆಟ್ಟಿರುವ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದ್ದವು. ಭಾರತವೇ ಈ ದಾಳಿಯನ್ನು ನಡೆಸಿಕೊಂಡು, ನಂತರ ಪಾಕಿಸ್ತಾನದ ಮೇಲೆ ಆರೋಪಿಸುತ್ತಿದೆ ಎಂದು ಅಫ್ರಿದಿ ವಾದಿಸಿದ್ದರು. “ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಒಂದು ಗಂಟೆ ಕಾಲ ಜನರನ್ನು ಕೊಲ್ಲುತ್ತಲೇ ಇದ್ದರು, ಆದರೆ 8 ಲಕ್ಷ ಭಾರತೀಯ ಸೈನಿಕರಲ್ಲಿ ಒಬ್ಬರೂ ಕಾಣಿಸಿಕೊಂಡಿಲ್ಲ.
ಆದರೆ ಅವರು ಬಂದಾಗ, ಪಾಕಿಸ್ತಾನವನ್ನು ದೂಷಿಸಿದರು” ಎಂದು ಅವರು ಸ್ಥಳೀಯ ವರದಿಗಾರರ ಮುಂದೆ ಹೇಳಿಕೊಂಡಿದ್ದರು. ” ನಂತರ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನದಲ್ಲಿ, “ಯಾವುದೇ ದೇಶ ಅಥವಾ ಧರ್ಮ ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ. ನಾವು ಯಾವಾಗಲೂ ಶಾಂತಿಯನ್ನು ಬೆಂಬಲಿಸುತ್ತೇವೆ. ಇಸ್ಲಾಂ ನಮಗೆ ಶಾಂತಿಯನ್ನು ಮಾತ್ರ ಕಲಿಸುತ್ತದೆ, ಮತ್ತು ಪಾಕಿಸ್ತಾನ ಅಂತಹ ಕೃತ್ಯಗಳನ್ನು ಎಂದಿಗೂ ಬೆಂಬಲಿಸುವುದಿಲ್ಲ. ನಾವು ಯಾವಾಗಲೂ ಭಾರತದೊಂದಿಗೆ ನಮ್ಮ ಸಂಬಂಧಗಳನ್ನು ಸುಧಾರಿಸಲು ಪ್ರಯತ್ನಿಸಿದ್ದೇವೆ” ಎಂದೂ ಹೇಳಿಕೆ ನೀಡಿದ್ದರು.
‘ಆಪರೇಷನ್ ಸಿಂಧೂರ್’ ನಂತರದ ಮೊದಲ ಮುಖಾಮುಖಿ ಇದೇ ಅಲ್ಲವೇ?
‘ಆಪರೇಷನ್ ಸಿಂಧೂರ್’ ನಂತರ ಭಾರತ ಮತ್ತು ಪಾಕಿಸ್ತಾನ ಕ್ರೀಡಾಕ್ಷೇತ್ರದಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲ ಬಾರಿ ಅಲ್ಲ. ಈ ಹಿಂದೆ, ಮೇ 24 ರಂದು ನಡೆದ ಜೂನಿಯರ್ ಡೇವಿಡ್ ಕಪ್ (U16 ಟೂರ್ನಮೆಂಟ್) ನಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿದ ನಂತರ ಒಂದು ವಿವಾದ ಭುಗಿಲೆದ್ದಿತ್ತು. ಪಾಕಿಸ್ತಾನದ ಆಟಗಾರನೊಬ್ಬ ಭಾರತೀಯ ಆಟಗಾರನೊಂದಿಗೆ ಹಸ್ತಲಾಘವ ಮಾಡುವಾಗ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದು ವೈರಲ್ ಆಗಿತ್ತು. ಆತ ಭಾರತೀಯ ಆಟಗಾರನ ಕೈಯನ್ನು ಅಸಭ್ಯವಾಗಿ ಕುಲುಕಿ, ನಂತರ ಒರಟಾಗಿ ತೆಗೆದುಹಾಕಿದ ವಿಡಿಯೋ ವ್ಯಾಪಕ ಟೀಕೆಗೆ ಗುರಿಯಾಗಿತ್ತು.