ನವದೆಹಲಿ: ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ತಮಗೆ ಭರವಸೆ ನೀಡಿದ್ದಾರೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಭಾರತ ಸರ್ಕಾರ ಸ್ಪಷ್ಟನೆ ನೀಡಿದೆ. ಅಸ್ಥಿರ ಇಂಧನ ಮಾರುಕಟ್ಟೆಯಲ್ಲಿ ಭಾರತೀಯ ಗ್ರಾಹಕರ ಹಿತಾಸಕ್ತಿ ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ವಿದೇಶಾಂಗ ಸಚಿವಾಲಯವು ಖಂಡತುಂಡವಾಗಿ ಹೇಳಿದೆ.
ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಭಾರತವು ತೈಲ ಮತ್ತು ಅನಿಲದ ಪ್ರಮುಖ ಆಮದುದಾರ ರಾಷ್ಟ್ರವಾಗಿದೆ. ಅಸ್ಥಿರ ಇಂಧನ ಪರಿಸ್ಥಿತಿಯಲ್ಲಿ ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ನಮ್ಮ ನಿರಂತರ ಆದ್ಯತೆಯಾಗಿದೆ. ನಮ್ಮ ಆಮದು ನೀತಿಗಳು ಸಂಪೂರ್ಣವಾಗಿ ಇದೇ ಉದ್ದೇಶವನ್ನು ಆಧರಿಸಿವೆ” ಎಂದು ತಿಳಿಸಿದ್ದಾರೆ.
“ಸ್ಥಿರ ಇಂಧನ ಬೆಲೆಗಳು ಮತ್ತು ಸುರಕ್ಷಿತ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಇಂಧನ ನೀತಿಯ ಅವಳಿ ಗುರಿಗಳಾಗಿವೆ. ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿ ನಮ್ಮ ಇಂಧನ ಮೂಲಗಳನ್ನು ವಿಸ್ತರಿಸುವುದು ಮತ್ತು ವೈವಿಧ್ಯಗೊಳಿಸುವುದನ್ನು ಇದು ಒಳಗೊಂಡಿದೆ. ಅಮೆರಿಕದ ವಿಚಾರಕ್ಕೆ ಬಂದರೆ, ಹಲವು ವರ್ಷಗಳಿಂದ ನಮ್ಮ ಇಂಧನ ಖರೀದಿಯನ್ನು ವಿಸ್ತರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಇದು ಕಳೆದ ದಶಕದಲ್ಲಿ ಸ್ಥಿರವಾಗಿ ಪ್ರಗತಿ ಕಂಡಿದೆ. ಪ್ರಸ್ತುತ ಆಡಳಿತವು ಭಾರತದೊಂದಿಗೆ ಇಂಧನ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ಆಸಕ್ತಿ ತೋರಿದ್ದು, ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ” ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
“ಟ್ರಂಪ್ ಹೇಳಿದ್ದೇನು”?
ರಷ್ಯಾದಿಂದ ಭಾರತ ತೈಲ ಖರೀದಿ ನಿಲ್ಲಿಸಲಿದೆ ಎಂದು ಪ್ರಧಾನಿ ಮೋದಿ ನನಗೆ ಭರವಸೆ ನೀಡಿದ್ದಾರೆ. “ಅವರು ತಕ್ಷಣವೇ ಇದನ್ನು ಮಾಡಲು ಸಾಧ್ಯವಿಲ್ಲ, ಅದೊಂದು ನಿಧಾನಗತಿಯ ಪ್ರಕ್ರಿಯೆಯಾಗಿದೆ. ಆದರೆ ಈ ಪ್ರಕ್ರಿಯೆಯು ಶೀಘ್ರದಲ್ಲೇ ಮುಗಿಯಲಿದೆ” ಎಂದು ಟ್ರಂಪ್ ಹೇಳಿದ್ದರು.
ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ, ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿರುವುದನ್ನು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ವಿರೋಧಿಸುತ್ತಲೇ ಬಂದಿವೆ. ಈ ಹಿಂದೆ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಈ ವಿಷಯದ ಬಗ್ಗೆ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದರು. “ಭಾರತವು ತನ್ನ ನಾಗರಿಕರಿಗೆ ಉತ್ತಮ ದರದಲ್ಲಿ ಇಂಧನ ಪಡೆಯಲು ಪ್ರಯತ್ನಿಸುತ್ತಿದೆ” ಎಂದಿದ್ದ ಅವರು, “ಯುರೋಪಿನ ಸಮಸ್ಯೆಗಳು ಜಗತ್ತಿನ ಸಮಸ್ಯೆಗಳು, ಆದರೆ ಜಗತ್ತಿನ ಸಮಸ್ಯೆಗಳು ಯುರೋಪಿನ ಸಮಸ್ಯೆಗಳಲ್ಲ ಎಂಬ ಮನಸ್ಥಿತಿಯಿಂದ ಪಾಶ್ಚಿಮಾತ್ಯರು ಹೊರಬರಬೇಕು” ಎಂದು ತಿರುಗೇಟು ನೀಡಿದ್ದರು. ಭಾರತವು ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದ್ದು ಕೂಡ ಟ್ರಂಪ್ ಅವರು ಭಾರತದ ವಿರುದ್ಧ ಸುಂಕ ಸಮರ ಸಾರಲು ಕಾರಣವಾಗಿತ್ತು.
“ವಿಪಕ್ಷಗಳ ಟೀಕೆ”
ಟ್ರಂಪ್ ಅವರ ಹೇಳಿಕೆ ಕುರಿತು ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, “ಪ್ರಧಾನಿ ಮೋದಿ ಟ್ರಂಪ್‌ಗೆ ಹೆದರಿದ್ದಾರೆ” ಎಂದು ಆರೋಪಿಸಿದ್ದಾರೆ. “ಭಾರತವು ರಷ್ಯಾದ ತೈಲವನ್ನು ಖರೀದಿಸುವುದಿಲ್ಲ ಎಂಬ ನಿರ್ಧಾರವನ್ನು ಟ್ರಂಪ್ ಪ್ರಕಟಿಸಲು ಅವಕಾಶ ನೀಡಿದ್ದಾರೆ. ಪದೇ ಪದೇ ಅವಮಾನಿಸಿದರೂ ಮೋದಿಯವರು ಅಭಿನಂದನಾ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ” ಎಂದು ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಟೀಕಿಸಿದ್ದಾರೆ.