ಬೆಂಗಳೂರು: ಅಂಚೆ ಕಚೇರಿಗಳು ಈಗ ಕೇವಲ ಪತ್ರ ವ್ಯವಹಾರಗಳಿಗೆ ಸೀಮಿತವಾಗಿಲ್ಲ. ಅಂಚೆ ಕಚೇರಿಗಳನ್ನು ಬ್ಯಾಂಕ್, ಹೂಡಿಕೆಯ ಸುರಕ್ಷಿತ ತಾಣಗಳನ್ನಾಗಿ ಬದಲಾಯಿಸಲಾಗಿದೆ. ಅಲ್ಲದೆ, ಅಂಚೆ ಕಚೇರಿಯು ಸಾರ್ವಜನಿಕರ ಹಿತದೃಷ್ಟಿಯಿಂದ ವಿಮಾ ಯೋಜನೆಗಳನ್ನೂ ಜಾರಿಗೆ ತಂದಿದೆ. ಹೌದು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಿಂದ ಅಪಘಾತ ವಿಮೆ ಜಾರಿಗೆ ತಂದಿದೆ. ವರ್ಷಕ್ಕೆ 520 ರೂ. ಪ್ರೀಮಿಯಂ ಪಾವತಿಸಿದರೂ 10 ಲಕ್ಷ ರೂ.ವರೆಗೆ ವಿಮಾ ಸುರಕ್ಷತೆ ಸಿಗಲಿದೆ.
ವರ್ಷಕ್ಕೆ 520 ರೂಪಾಯಿ ಪ್ರೀಮಿಯಂ ಪಾವತಿಸಿದರೆ, 10 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಪಡೆಯಬಹುದು. ಅಂಚೆ ಇಲಾಖೆಯು ಟಾಟಾ ಎಐಜಿ ಸಹಯೋಗದೊಂದಿಗೆ ಈ ವಿಮೆಯನ್ನು ಒದಗಿಸುತ್ತಿದೆ. ಪಾಲಿಸಿದಾರ ಅಪಘಾತದಲ್ಲಿ ಮರಣ ಹೊಂದಿದರೆ, ನಾಮಿನಿಗೆ 10 ಲಕ್ಷ ರೂ. ನೀಡಲಾಗುತ್ತದೆ. ಅಷ್ಟೇ ಅಲ್ಲ, ಶಾಶ್ವತ ಅಂಗವೈಕಲ್ಯ ಅಥವಾ ಭಾಗಶಃ ಅಂಗವೈಕಲ್ಯ ಉಂಟಾದರೂ 10 ಲಕ್ಷ ರೂ. ನೀಡಲಾಗುತ್ತದೆ.
ಅಪಘಾತ ಮತ್ತು ಆಸ್ಪತ್ರೆಗೆ ದಾಖಲಾದ ನಂತರ, ವೈದ್ಯಕೀಯ ವೆಚ್ಚಕ್ಕೆ 1 ಲಕ್ಷ ರೂ. ನೀಡಲಾಗುತ್ತದೆ. ಪಾಲಿಸಿದಾರ ಮೃತಪಟ್ಟರೆ, 21 ವರ್ಷದೊಳಗಿನ ಇಬ್ಬರು ಮಕ್ಕಳ ಶಿಕ್ಷಣಕ್ಕಾಗಿ 1 ಲಕ್ಷ ರೂ. ನೀಡಲಾಗುವುದು. ಇದಲ್ಲದೆ, ನೀವು ಒಂದು ಅಥವಾ ಎರಡು ದಿನಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೆ, ವೈದ್ಯರ ಪ್ರಿಸ್ಕ್ರಿಪ್ಷನ್ ಪ್ರಕಾರ ಗರಿಷ್ಠ 1 ಲಕ್ಷದವರೆಗೆ ವೆಚ್ಚವನ್ನು ಪಾವತಿಸಲಾಗುತ್ತದೆ.
15 ಲಕ್ಷ ರೂ. ವಿಮಾ ಸುರಕ್ಷೆ ಯೋಜನೆ
ನಿಪಾ, ಬುಪಾ ಆರೋಗ್ಯ ವಿಮಾ ಕಂಪನಿಯ ಸಹಭಾಗಿತ್ವದಲ್ಲಿ ಮತ್ತೊಂದು ಅಪಘಾತ ವಿಮೆಯನ್ನು ನೀಡುತ್ತಿದೆ. ವರ್ಷಕ್ಕೆ ಕೇವಲ 755 ರೂ. ಪ್ರೀಮಿಯಂ ಪಾವತಿಸಿದರೆ, 15 ಲಕ್ಷ ರೂ. ವಿಮಾ ಸುರಕ್ಷೆ ಸಿಗಲಿದೆ. ಹಾಗೊಂದು ವೇಳೆ, ಪಾಲಿಸಿ ಮಾಡಿಸಿದವರು ಅಪಘಾತದಲ್ಲಿ ಮೃತಪಟ್ಟರೆ, ನಾಮಿನಿಗೆ 15 ಲಕ್ಷ ರೂ. ನೀಡಲಾಗುತ್ತದೆ. ಅಪಘಾತ ಸಂಭವಿಸಿ ಆಸ್ಪತ್ರೆಗೆ ದಾಖಲಾದರೆ, 1 ಲಕ್ಷ ರೂ. ವೈದ್ಯಕೀಯ ವೆಚ್ಚ ನೀಡಲಾಗುತ್ತದೆ. ಸಾಮಾನ್ಯ ಚಿಕಿತ್ಸೆಗಾಗಿ ದಿನಕ್ಕೆ 1000 ರೂಪಾಯಿ ನೀಡಲಾಗುತ್ತದೆ. ಕಾಲು ಅಥವಾ ತೋಳು ಮುರಿದರೆ 25,000 ರೂ.ವರೆಗೆ ಪರಿಹಾರ ನೀಡಲಾಗುತ್ತದೆ. ಮಕ್ಕಳ ಉನ್ನತ ಶಿಕ್ಷಣ ಮತ್ತು ಮದುವೆಗೆ 1 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುತ್ತದೆ.
ಗಮನಿಸಿ: ಅಂಚೆ ಇಲಾಖೆಯ ವಿಮಾ ಯೋಜನೆಯ ಕುರಿತು ಮಾಹಿತಿ ನೀಡುವುದಷ್ಟೇ ನಮ್ಮ ಉದ್ದೇಶ. ಅಂಚೆ ಕಚೇರಿ ಸೇರಿ ಯಾವುದೇ ಪಾಲಿಸಿ ಖರೀದಿಸುವ ಮುನ್ನ ಪರಿಣತರ ಸಲಹೆಗಳನ್ನು ಪಡೆಯಿರಿ. ಪಾಲಿಸಿಯ ಪ್ರತಿಯೊಂದು ನಿಯಮಗಳನ್ನು ಓದಿಕೊಂಡ ಬಳಿಕವೇ ಖರೀದಿಸಿ.