ನವದೆಹಲಿ: ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಯುರೋಪ್, ರಷ್ಯಾದ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಿರುವುದರಿಂದ ಭಾರತವು ತನ್ನ ಅತಿದೊಡ್ಡ ತೈಲ ಪೂರೈಕೆದಾರನಾದ ರಷ್ಯಾದಿಂದ ಕಚ್ಚಾ ತೈಲ ಆಮದನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ರಷ್ಯಾದ ಪ್ರಮುಖ ಇಂಧನ ಕಂಪನಿಗಳಾದ ರಾಸ್ನೆಫ್ಟ್ (Rosneft) ಮತ್ತು ಲುಕೋಯಿಲ್ (Lukoil) ಮೇಲೆ ಅಮೆರಿಕ ಹೆಚ್ಚುವರಿ ನಿರ್ಬಂಧಗಳನ್ನು ಹೇರುವ ಮೂಲಕ ರಷ್ಯಾ ಮೇಲೆ ಒತ್ತಡ ತರಲಾರಂಭಿಸಿದೆ. ಬ್ರಿಟನ್ ಕೂಡ ಈ ಕಂಪನಿಗಳನ್ನು ನಿರ್ಬಂಧಿಸಿದ್ದು, ಯುರೋಪಿಯನ್ ಒಕ್ಕೂಟವು ರಷ್ಯಾದ ದ್ರವೀಕೃತ ನೈಸರ್ಗಿಕ ಅನಿಲ (LNG) ಆಮದನ್ನು ನಿಷೇಧಿಸುವ 19ನೇ ಸುತ್ತಿನ ನಿರ್ಬಂಧಗಳಿಗೆ ಅನುಮೋದನೆ ನೀಡಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತದ ತೈಲ ಸಂಸ್ಕರಣಾಗಾರಗಳು ತಮ್ಮ ಖರೀದಿ ಯೋಜನೆಗಳನ್ನು ಮರುಪರಿಶೀಲಿಸುತ್ತಿವೆ.
ಪ್ರಮುಖ ಬೆಳವಣಿಗೆಗಳು:
ದೇಶದ ಅತಿದೊಡ್ಡ ಖಾಸಗಿ ತೈಲ ಖರೀದಿದಾರನಾದ ರಿಲಯನ್ಸ್ ಇಂಡಸ್ಟ್ರೀಸ್, ಮಾಸ್ಕೋದಿಂದ ತನ್ನ ಕಚ್ಚಾ ತೈಲ ಆಮದನ್ನು ಗಣನೀಯವಾಗಿ ಕಡಿತಗೊಳಿಸಲು ಅಥವಾ ಸಂಪೂರ್ಣವಾಗಿ ನಿಲ್ಲಿಸಲು ಯೋಜಿಸುತ್ತಿದೆ ಎಂದು ಎರಡು ಸಂಸ್ಕರಣಾ ಮೂಲಗಳು ತಿಳಿಸಿವೆ. ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ರಿಲಯನ್ಸ್ ತನ್ನ ಆಮದುಗಳನ್ನು ಮರುಹೊಂದಿಸುತ್ತಿದೆ ಎಂದು ವರದಿಯಾಗಿದೆ.
ಇದೇ ವೇಳೆ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾಗಾರಗಳು ಕೂಡ ತಮ್ಮ ಪೂರೈಕಾ ಒಪ್ಪಂದಗಳನ್ನು ಪರಿಶೀಲಿಸುತ್ತಿದ್ದು, ರಾಸ್ನೆಫ್ಟ್ ಅಥವಾ ಲುಕೋಯಿಲ್‌ನಿಂದ ನೇರವಾಗಿ ಯಾವುದೇ ತೈಲ ಬರದಂತೆ ಖಚಿತಪಡಿಸಿಕೊಳ್ಳುತ್ತಿವೆ ಎನ್ನಲಾಗಿದೆ.
ಭಾರತವು ರಷ್ಯಾದ ತೈಲ ಆಮದನ್ನು ಪರಿಶೀಲಿಸುತ್ತಿದೆ ಎಂಬ ವರದಿ ಹೊರಬರುತ್ತಿದ್ದಂತೆ, ಗುರುವಾರ ತೈಲ ಬೆಲೆಗಳು ಸುಮಾರು ಶೇ.3ರಷ್ಟು ಏರಿಕೆಯಾಗಿವೆ. ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 64.53 ಡಾಲರ್‌ಗೆ ಮತ್ತು ಯು.ಎಸ್. ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 60.39 ಡಾಲರ್‍ಗೆಏರಿಕೆಯಾಗಿದೆ.
ಭಾರತದ ನಿಲುವಿನ ಮೇಲೆ ಒತ್ತಡ
ಕಳೆದ ಎರಡು ವರ್ಷಗಳಲ್ಲಿ, ಪಾಶ್ಚಿಮಾತ್ಯ ದೇಶಗಳು ರಷ್ಯಾದಿಂದ ಖರೀದಿ ಕಡಿಮೆ ಮಾಡಿದ ನಂತರ, ಭಾರತೀಯ ಸಂಸ್ಕರಣಾಗಾರಗಳು ಅಗ್ಗದ ಬೆಲೆಯಲ್ಲಿ ರಷ್ಯಾದಿಂದ ಅಪಾರ ಪ್ರಮಾಣದ ತೈಲವನ್ನು ಆಮದು ಮಾಡಿಕೊಂಡಿದ್ದವು. ಆದರೆ, ಈಗ ಅಮೆರಿಕದ ಒತ್ತಡ ಹೆಚ್ಚಾಗುತ್ತಿರುವುದರಿಂದ ಭಾರತವು ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಪರ್ಯಾಯ ಪೂರೈಕೆದಾರರತ್ತ ಮುಖ ಮಾಡುವ ಸಾಧ್ಯತೆಯಿದೆ.
ಇನ್ನೊಂದೆಡೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ, ನಾನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದು, ರಷ್ಯಾ ತೈಲ ಆಮದು ಸ್ಥಗಿತಗೊಳಿಸುವುದಾಗಿ ಮೋದಿಯವರೇ ನನಗೆ ಭರವಸೆ ನೀಡಿದ್ದಾರೆ ಎಂದು ಪದೇ ಪದೇ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಭಾರತವು ಇದನ್ನು ತಿರಸ್ಕರಿಸಿ, ಟ್ರಂಪ್-ಮೋದಿ ಮಧ್ಯೆ ಯಾವುದೇ ಮಾತುಕತೆ ನಡೆದಿಲ್ಲ ಎಂದಿದೆ. ಈ ಮಧ್ಯೆಯೂ ಭಾರತವು ಈ ವರ್ಷದ ಅಂತ್ಯದ ವೇಳೆಗೆ ರಷ್ಯಾದ ತೈಲ ಆಮದನ್ನು ಗಣನೀಯವಾಗಿ ಕಡಿಮೆ ಮಾಡಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ನಿರ್ಬಂಧಗಳು ರಷ್ಯಾದ ಯುದ್ಧದ ಆದಾಯವನ್ನು ತಡೆಯುವ ಗುರಿ ಹೊಂದಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.