ವಾಷಿಂಗ್ಟನ್/ನವದೆಹಲಿ : ಭಾರತ-ಅಮೆರಿಕ ಐತಿಹಾಸಿಕ ವ್ಯಾಪಾರ ಒಪ್ಪಂದದ ನಡುವೆಯೇ ಅಮೆರಿಕ ಸರ್ಕಾರವು ಒಂದು ಅಚ್ಚರಿಯ ಹಾಗೂ ಅತ್ಯಂತ ಮಹತ್ವದ ರಾಜತಾಂತ್ರಿಕ ಹೆಜ್ಜೆಯನ್ನು ಇಟ್ಟಿದೆ. ಶನಿವಾರ ವ್ಯಾಪಾರ ಒಪ್ಪಂದದ ವಿವರಗಳನ್ನು ಬಿಡುಗಡೆ ಮಾಡಿದ ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ಕಚೇರಿ (USTR), ಅದರ ವಿವರಗಳನ್ನು ನೀಡುವ ವೇಳೆ ಭಾರತದ ಅಧಿಕೃತ ಭೂಪಟವನ್ನೂ ಪ್ರಕಟಿಸಿದೆ. ಈ ಭೂಪಟದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಚೀನಾ ಆಕ್ರಮಿತ ಅಕ್ಸಾಯ್ ಚಿನ್ ಪ್ರದೇಶಗಳನ್ನು ಭಾರತದ ಅವಿಭಾಜ್ಯ ಅಂಗಗಳನ್ನಾಗಿ ತೋರಿಸಲಾಗಿದ್ದು, ಇದು ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಪಾಕಿಸ್ತಾನಕ್ಕೆ ಮುಖಭಂಗ
ದಶಕಗಳಿಂದ ಅಮೆರಿಕದ ವಿದೇಶಾಂಗ ಇಲಾಖೆಯು ತನ್ನ ಭೂಪಟಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಗಡಿಗಳನ್ನು ವಿವಾದಾತ್ಮಕ ಎಂಬಂತೆ ಬಿಂಬಿಸುತ್ತಿತ್ತು. ಪಾಕಿಸ್ತಾನದ ಆಕ್ಷೇಪಣೆಗಳಿಗೆ ಮಣಿದು ಪಿಒಕೆ ಪ್ರದೇಶವನ್ನು ಪ್ರತ್ಯೇಕವಾಗಿ ತೋರಿಸುವುದು ವಾಡಿಕೆಯಾಗಿತ್ತು. ಆದರೆ, ಈಗಿನ ಟ್ರಂಪ್ ಆಡಳಿತವು ಈ ಸಂಪ್ರದಾಯವನ್ನು ಮುರಿದು ಇಡೀ ಕಾಶ್ಮೀರವನ್ನು ಭಾರತದ ಭೂಭಾಗದೊಳಗೆ ತೋರಿಸುವ ಮೂಲಕ ಪಾಕಿಸ್ತಾನದ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಇದು ಅಮೆರಿಕದ ಮಿತ್ರ ಎಂದು ಕೊಚ್ಚಿಕೊಳ್ಳುತ್ತಿದ್ದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗ ಉಂಟುಮಾಡಿದೆ. ಈ ಕ್ರಮವು ಪಾಕಿಸ್ತಾನಕ್ಕೆ ಅಮೆರಿಕ ನೀಡಿದ ದೊಡ್ಡ ರಾಜತಾಂತ್ರಿಕ ಹೊಡೆತ ಎಂದೂ ವಿಶ್ಲೇಷಿಸಲಾಗುತ್ತಿದೆ.
ಅಕ್ಸಾಯ್ ಚಿನ್ ವಿಚಾರದಲ್ಲಿ ಚೀನಾಕ್ಕೂ ಎಚ್ಚರಿಕೆ
ಅಮೆರಿಕ ಬಿಡುಗಡೆ ಮಾಡಿದ ಈ ನಕ್ಷೆಯಲ್ಲಿ ಕೇವಲ ಪಾಕಿಸ್ತಾನ ಮಾತ್ರವಲ್ಲದೆ ಚೀನಾದ ಕೆಂಗಣ್ಣಿಗೂ ಗುರಿಯಾಗುವಂತಹ ಅಂಶವನ್ನು ಸೇರಿಸಲಾಗಿದೆ. ಲಡಾಖ್‌ನ ಈಶಾನ್ಯ ಭಾಗದಲ್ಲಿರುವ ಅಕ್ಸಾಯ್ ಚಿನ್ ಪ್ರದೇಶವನ್ನು ಸಹ ಭಾರತದ ಭೂಪಟದೊಳಗೆ ಸೇರಿಸಲಾಗಿದೆ. ಅಕ್ಸಾಯ್ ಚಿನ್ ತನ್ನ ಪ್ರದೇಶವೆಂದು ಚೀನಾ ಪ್ರತಿಪಾದಿಸುತ್ತಿದ್ದರೂ, ಅಮೆರಿಕ ಅದನ್ನು ಭಾರತದ ಭಾಗವೆಂದು ತೋರಿಸುವ ಮೂಲಕ ಭಾರತದ ಸಾರ್ವಭೌಮತ್ವಕ್ಕೆ ಬಹಿರಂಗ ಬೆಂಬಲ ಸೂಚಿಸಿದೆ. ಭಾರತದ ಗಡಿಗಳನ್ನು ತಪ್ಪು ತಪ್ಪಾಗಿ ಚಿತ್ರಿಸುವ ಜಾಗತಿಕ ಸಂಸ್ಥೆಗಳ ಕ್ರಮಕ್ಕೆ ಭಾರತದ ವಿದೇಶಾಂಗ ಇಲಾಖೆ ಈ ಹಿಂದೆ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಭಾರತದ ಪರ ಅಮೆರಿಕ ನಿಂತಂತಾಗಿದೆ.
ಭಾರತವು ಯಾವಾಗಲೂ ಜಮ್ಮು ಮತ್ತು ಕಾಶ್ಮೀರ ತನ್ನ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸುತ್ತಾ ಬಂದಿದೆ. ತನ್ನ ಈ ನಿಲುವಿಗೆ ಅಮೆರಿಕದಂತಹ ದೊಡ್ಡ ಶಕ್ತಿಯ ಬೆಂಬಲ ಬೇಕು ಎಂದು ಭಾರತ ಎಂದೂ ಕಾಯುತ್ತಿರಲಿಲ್ಲವಾದರೂ, ವ್ಯಾಪಾರ ಒಪ್ಪಂದದ ಸಂದರ್ಭದಲ್ಲೇ ಇಂತಹದೊಂದು ಭೂಪಟ ಬಿಡುಗಡೆಯಾಗಿರುವುದು ಉಭಯ ದೇಶಗಳ ಸ್ನೇಹ ಎಷ್ಟು ಆಳವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ರಷ್ಯಾ ತೈಲ ಖರೀದಿಯನ್ನು ಸ್ಥಗಿತಗೊಳಿಸಿದ ಭಾರತದ ನಿರ್ಧಾರಕ್ಕೆ ಅಮೆರಿಕ ನೀಡಿದ ಅತ್ಯಂತ ದೊಡ್ಡ ‘ಉಡುಗೊರೆ’ ಇದಾಗಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ, ಡಿಕೆಶಿ ಹೇಳಿದ್ರೆ ಪ್ರಾಣ ಕೊಡೋದಕ್ಕೂ ರೆಡಿ | ಶಿವಗಂಗಾ ಬಸವರಾಜ್



















