ವಿಶ್ವದಲ್ಲಿಯೇ ಒಂದು ವರ್ಷದ ಅವಧಿಯಲ್ಲಿ ಅತೀ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿರುವುದು ಭಾರತದಲ್ಲಿ ಎಂದು ವರದಿಯೊಂದು ಬಹಿರಂಗಪಡಿಸಿದೆ. ಅದೂ ಈ ವರ್ಷದ ಋತುವಿನಲ್ಲಿ ಎಂಬುವುದು ವಿಶೇಷ.
ಪರಿಣಾಮವಾಗಿ ಡಿಸೆಂಬರ್ ತ್ರೈಮಾಸಿಕದಲ್ಲಿ ಉದ್ಯೋಗಗಳ ಮೇಲೆ ಹೆಚ್ಚಳ ಸ್ಪಷ್ಟವಾಗಿ ತಿಳಿಯಲಿದೆ ಎಂದು ಸಮೀಕ್ಷೆ ಹೇಳಿದೆ. ಈ ಸಮೀಕ್ಷೆಯಲ್ಲಿ ಒಟ್ಟು 42 ದೇಶಗಳನ್ನು ಸೇರಿಸಲಾಗಿದೆ. ಅಲ್ಲದೇ, ಸಮೀಕ್ಷೆಯಲ್ಲಿ 3,150 ಭಾರತೀಯ ಕಂಪನಿಗಳನ್ನು ಸೇರಿಸಲಾಗಿದೆ.
ಮ್ಯಾನ್ ಪವರ್ ಗ್ರೂಪ್ ಎಂಪ್ಲಾಯ್ಮೆಂಟ್ ಔಟ್ಲುಕ್ ನಡೆಸಿದ ಜಾಗತಿಕ ಸಮೀಕ್ಷೆಯನ್ನು ಎಕನಾಮಿಕ್ ಟೈಮ್ಸ್ ಉಲ್ಲೇಖಿಸಿದೆ. 42 ದೇಶಗಳಲ್ಲಿ ಭಾರತೀಯ ಕಂಪನಿಗಳು ನೇಮಕಾತಿಯಲ್ಲಿ ಹೆಚ್ಚು ಸಕಾರಾತ್ಮಕವಾಗಿವೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.
ವಿವಿಧ ಕ್ಷೇತ್ರಗಳ 3,150 ಭಾರತೀಯ ಕಂಪನಿಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಈ ಅಂಕಿ ಅಂಶದಲ್ಲಿ ಶೇ. 7 ರಷ್ಟು ಉದ್ಯೋಗ ಸೃಷ್ಟಿ ಏರಿಕೆಯಾಗಿದೆ. ಈ ಅಂಕಿ ಅಂಶವು ಜಾಗತಿಕ ಸರಾಸರಿಗಿಂತ ಶೇ. 1 ರಷ್ಟು ಹೆಚ್ಚಳವಾಗಿದೆ.
50 ರಷ್ಟು ಕಂಪನಿಗಳು ಹೆಚ್ಚಿನ ಉದ್ಯೋಗಗಳನ್ನು ನೀಡಲು ತಯಾರಿ ನಡೆಸುತ್ತಿವೆ. ಸಮೀಕ್ಷೆಯಲ್ಲಿ ಭಾಗವಹಿಸಿದ 50 ಪ್ರತಿಶತದಷ್ಟು ಕಂಪನಿಗಳು ಹೆಚ್ಚಿನ ಜನರಿಗೆ ಉದ್ಯೋಗ ನೀಡುವುದಾಗಿ ಹೇಳಿವೆ. ಕೇವಲ ಶೇ. 13 ರಷ್ಟು ಕಂಪನಿಗಳು ಮಾತ್ರ ನೇಮಕಾತಿಗೆ ಆಸಕ್ತಿ ಹೊಂದಿಲ್ಲ. ಅಲ್ಲದೆ, ಶೇ. 34ರಷ್ಟು ಜನರು ತಮ್ಮ ಉದ್ಯೋಗಿಗಳ ಬಗ್ಗೆ ತೃಪ್ತಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಈ ಪೈಕಿ ಶೇ.3ರಷ್ಟು ಮಂದಿಗೆ ಇನ್ನೂ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಮ್ಯಾನ್ ಪವರ್ ಗ್ರೂಪ್ ಇಂಡಿಯಾ ಮತ್ತು ಮಧ್ಯಪ್ರಾಚ್ಯ ಎಂಡಿ ಸಂದೀಪ್ ಗುಲಾಟಿ ಮಾತನಾಡಿ, ದೇಶದ ಆರ್ಥಿಕ ಪರಿಸ್ಥಿತಿ ಬಲವಾಗಿದೆ. ಭಾರತದಲ್ಲಿ ದೇಶೀಯ ಬಳಕೆ ಹೆಚ್ಚಾಗಿದೆ. ಸರ್ಕಾರವು ತನ್ನ ವೆಚ್ಚವನ್ನು ಹೆಚ್ಚಿಸುತ್ತಿದೆ. ಅದೇ ಸಮಯದಲ್ಲಿ, ಉತ್ಪಾದನೆ ಮತ್ತು ಹೊರಗುತ್ತಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಆರ್ಥಿಕತೆ ಹೆಚ್ಚಾದರೆ, ನಿರುದ್ಯೋಗವು ಸ್ವಯಂಚಾಲಿತವಾಗಿ ಕಡಿಮೆಯಾಗುತ್ತದೆ. ದೇಶೀಯ ಬಳಕೆಯ ಹೆಚ್ಚಳದ ಪರಿಣಾಮ ಭಾರತ ಹಾಗೂ ಭಾರತೀಯ ಕಂಪನಿಗಳಲ್ಲಿ ಉದ್ಯೋಗ ಸೃಷ್ಟಿಯಾಗುವುದಕ್ಕೆ ಕಾರಣವಾಗುತ್ತಿದೆ.
ಇತ್ತೀಚೆಗಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಎಂದಿದ್ದರು. ಬಲವಾದ ಸ್ಥಾನದಲ್ಲಿ ಇದ್ದೇವೆ. ಕೌಶಲ್ಯ ಅಭಿವೃದ್ಧಿಯಲ್ಲಿ ಸರ್ಕಾರವು ಅದ್ಭುತ ಕೆಲಸಗಳನ್ನು ಮಾಡುತ್ತಿದೆ. ಆರ್ಥಿಕತೆಯು ಬಲಗೊಳ್ಳುತ್ತಿದ್ದಂತೆ, ನಾವು ನಿರುದ್ಯೋಗವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದಿದ್ದರು. ಅದರಂತೆ ಈಗ ಭಾರತ ಬೆಳೆಯುತ್ತಿರುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಂತಾಗಿದೆ.