ನವದೆಹಲಿ : 2026ರ ಟಿ20 ವಿಶ್ವಕಪ್‌ನಲ್ಲಿ ಅಜೇಯ ಓಟ ಮುಂದುವರಿಸಿರುವ ಟೀಮ್ ಇಂಡಿಯಾ, ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದು ಬೀಗಿದೆ. ಆದರೆ, ಈ ಗೆಲುವಿನ ಸಂಭ್ರಮದ ನಡುವೆಯೂ ತಂಡದ ಕಳಪೆ ಫೀಲ್ಡಿಂಗ್, ವಿಶೇಷವಾಗಿ ಕ್ಯಾಚ್ ಕೈಚೆಲ್ಲುವ ಚಾಳಿ ಮಾಜಿ ಕ್ರಿಕೆಟಿಗರ ನಿದ್ದೆಗೆಡಿಸಿದೆ. ಈ ಬಗ್ಗೆ ಮಾತನಾಡಿರುವ ಮಾಜಿ ವೇಗಿ ವರುಣ್ ಆರೋನ್, “ಭಾರತ ಕಳೆದ 12-18 ತಿಂಗಳುಗಳಲ್ಲಿ ಅತ್ಯಂತ ಕಳಪೆ ಕ್ಯಾಚಿಂಗ್ ತಂಡವಾಗಿದೆ,” ಎಂದು ನೇರವಾಗಿಯೇ ಎಚ್ಚರಿಸಿದ್ದಾರೆ.
ಕ್ಯಾಚ್ ಬಿಟ್ಟರೆ ಮ್ಯಾಚ್ ಬಿಟ್ಟಂತೆ
ಟೂರ್ನಿಯಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಆದರೆ ಫೀಲ್ಡಿಂಗ್ ವಿಚಾರಕ್ಕೆ ಬಂದರೆ ಚಿತ್ರಣ ಬೇರೆಯೇ ಇದೆ. ಲೀಗ್ ಹಂತದ 4 ಪಂದ್ಯಗಳಲ್ಲಿ ಭಾರತೀಯ ಆಟಗಾರರು ಬರೋಬ್ಬರಿ 9 ಕ್ಯಾಚ್‌ಗಳನ್ನು ಕೈಚೆಲ್ಲಿದ್ದಾರೆ! ಇದು ಟೂರ್ನಿಯಲ್ಲಿ ಐರ್ಲೆಂಡ್ (10) ನಂತರದ ಅತಿ ಹೆಚ್ಚು ಕ್ಯಾಚ್ ಬಿಟ್ಟ ತಂಡ ಎಂಬ ಅಪಖ್ಯಾತಿಗೆ ಭಾರತವನ್ನು ಗುರಿಮಾಡಿದೆ.
ನೆದರ್ಲ್ಯಾಂಡ್ಸ್ ವಿರುದ್ಧವೂ ಎಡವಟ್ಟು
ಬುಧವಾರ ನೆದರ್ಲ್ಯಾಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲೂ ಈ ಸಮಸ್ಯೆ ಮರುಕಳಿಸಿತು. ಡಚ್ ಬ್ಯಾಟರ್ ಝ್ಯಾಕ್ ಲಯನ್-ಕ್ಯಾಚೆಟ್ ಅವರಿಗೆ ಭಾರತೀಯ ಫೀಲ್ಡರ್‌ಗಳು ಎರಡು ಬಾರಿ ಜೀವದಾನ ನೀಡಿದರು. ನಾಯಕ ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ನಡುವಿನ ಗೊಂದಲದಿಂದ ಒಂದು ಕ್ಯಾಚ್ ಕೈಜಾರಿದರೆ, ಅಂತಿಮ ಓವರ್‌ನಲ್ಲಿ ತಿಲಕ್ ವರ್ಮಾ ಮತ್ತೊಂದು ಸುಲಭ ಕ್ಯಾಚ್ ಬಿಟ್ಟರು.
ವರುಣ್ ಆರೋನ್ ಹೇಳಿದ್ದೇನು?
ಈ ಬಗ್ಗೆ ಇಎಸ್‌ಪಿಎನ್ ಕ್ರಿಕ್‌ಇನ್ಫೋ ಜೊತೆ ಮಾತನಾಡಿದ ವರುಣ್ ಆರೋನ್, “ಇದೊಂದು ಗಂಭೀರ ಸಮಸ್ಯೆ. ಭಾರತದ ಕ್ಯಾಚಿಂಗ್ ಯಶಸ್ಸಿನ ಪ್ರಮಾಣ ಶೇ. 70ಕ್ಕಿಂತ ಕಡಿಮೆಯಿದೆ. ಪ್ರತಿ ಪಂದ್ಯದಲ್ಲೂ ಕನಿಷ್ಠ 2-3 ಕ್ಯಾಚ್ ಬಿಡುತ್ತಿದ್ದಾರೆ. ಲೀಗ್ ಹಂತದಲ್ಲಿ ಇದು ದೊಡ್ಡ ಪರಿಣಾಮ ಬೀರದಿದ್ದರೂ, ಸೂಪರ್-8 ಮತ್ತು ಸೆಮಿಫೈನಲ್‌ನಂತಹ ನಿರ್ಣಾಯಕ ಪಂದ್ಯಗಳಲ್ಲಿ ಮಹತ್ವದ ಕ್ಯಾಚ್ ಕೈಚೆಲ್ಲಿದರೆ ತಂಡಕ್ಕೆ ದೊಡ್ಡ ಪೆಟ್ಟು ಬೀಳಬಹುದು,” ಎಂದು ಎಚ್ಚರಿಸಿದ್ದಾರೆ.
ಮುಂದಿದೆ ಕಠಿಣ ಸವಾಲು
ಭಾರತ ಈಗ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದ್ದು, ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಹೊಂದಿರುವ ತಂಡಗಳ ವಿರುದ್ಧ ಇದೇ ತಪ್ಪುಗಳು ಮರುಕಳಿಸಿದರೆ, ಭಾರತಕ್ಕೆ ದುಬಾರಿಯಾಗುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ : ಚಿನ್ನ ಅಡವಿಟ್ಟು ಸಾಲ ಪಡೆಯುವವರಿಗೆ ಗುಡ್ ನ್ಯೂಸ್ | ಆ್ಯಕ್ಸಿಸ್ ಬ್ಯಾಂಕಿನಿಂದ ವಿಶೇಷ ಕೊಡುಗೆ



















