ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಸಂಘರ್ಷ ನಡೆಯುತ್ತಿದೆ. ಇಸ್ರೇಲ್-ಅಮೆರಿಕ ಜತೆಗೂಡಿ ಇರಾನ್ ಮೇಲೆ ಸಮರ ಸಾರಿವೆ. ಇರಾನ್ ಕೂಡ ಪ್ರತಿದಾಳಿ ನಡೆಸುತ್ತಿದೆ. ಯುದ್ಧದ ಕಾರಣ ಹಾರ್ಮುಜ್ ಜಲಸಂಧಿಯು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯೂ ಪ್ರತಿ ಬ್ಯಾರೆಲ್ ಗೆ 100 ಡಾಲರ್ ತಲುಪಿದೆ. ಅಷ್ಟೇ ಅಲ್ಲ, ಭಾರತಕ್ಕೆ ಸರಿಯಾಗಿ ಅಡುಗೆ ಅನಿಲವೂ ಪೂರೈಕೆಯಾಗುತ್ತಿಲ್ಲ. ಹಾಗಾಗಿ, ಕೇಂದ್ರ ಸರ್ಕಾರವು ಎಲ್ ಪಿಜಿ ಸಿಲಿಂಡರ್ ಬುಕ್ಕಿಂಗ್ ಅವಧಿಯನ್ನು 21ರಿಂದ 25 ದಿನಗಳಿಗೆ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ, ದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್ ಕೊರತೆಯಾಗಲಿದೆ ಎಂದು ಕೂಡ ಹೇಳಲಾಗುತ್ತಿದೆ.
ಅಂದರೆ, ಒಂದು ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಿ, ತರಿಸಿಕೊಂಡ 21 ದಿನಗಳ ನಂತರವೇ ಮತ್ತೊಂದು ಅಡುಗೆ ಅನಿಲ ಸಿಲಿಂಡರ್ ಗೆ ಬುಕ್ ಮಾಡಲು ಅವಕಾಶವಿತ್ತು. ಇದನ್ನು ಈಗ ಕೇಂದ್ರ ಸರ್ಕಾರವು 25 ದಿನಗಳವರೆಗೆ ವಿಸ್ತರಣೆ ಮಾಡಿದೆ. ಈಗ ಒಂದು ಎಲ್ ಪಿಜಿ ಸಿಲಿಂಡರ್ ಬುಕ್ ಮಾಡಿದ 25 ದಿನಗಳ ಬಳಿಕವೇ ಮತ್ತೊಂದು ಸಿಲಿಂಡರ್ ಗೆ ಬುಕ್ ಮಾಡಬಹುದಾಗಿದೆ.
ಯುದ್ಧದ ಹಿನ್ನೆಲೆಯಲ್ಲಿ ಭಾರತಕ್ಕೆ ಅಡುಗೆ ಅನಿಲ ಪೂರೈಕೆ ಕಡಿಮೆಯಾಗಿದೆ. ಇದರಿಂದಾಗಿ ಜನರಿಗೆ ಆತಂಕ ಎದುರಾಗಿದೆ. ಅಡುಗೆ ಅನಿಲ ಸಿಲಿಂಡರ್ ಕೊರತೆಯಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ, ಮೊದಲು ಒಂದು ಸಿಲಿಂಡರ್ ಬುಕ್ ಮಾಡಿದ ಸರಾಸರಿ 55 ದಿನಗಳ ಬಳಿಕ ಮತ್ತೊಂದು ಸಿಲಿಂಡರ್ ಆರ್ಡರ್ ಮಾಡುತ್ತಿದ್ದರು. ಈಗ ಭೀತಿಯ ಹಿನ್ನೆಲೆಯಲ್ಲಿ 15 ದಿನಗಳಲ್ಲಿಯೇ ಇನ್ನೊಂದು ಸಿಲಿಂಡರ್ ಗೆ ಬುಕ್ ಮಾಡಲಾಗುತ್ತಿದೆ. ಹಾಗಾಗಿ, ಮಾರುಕಟ್ಟೆಯಲ್ಲಿ ಅಭಾವ ಸೃಷ್ಟಿಯಾಗಬಾರದು ಎಂದು ಕೇಂದ್ರ ಸರ್ಕಾರವು 25 ದಿನಗಳಿಗೆ ಬುಕ್ಕಿಂಗ್ ಅವಧಿಯನ್ನು ಏರಿಕೆ ಮಾಡಿದೆ.
ಹಾಗೆಯೇ, ದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್ ಗಳಿಗೆ ಕೊರತೆ ಇಲ್ಲ. ದೇಶದ ಜನ ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು ಎಂದು ಕೂಡ ಕೇಂದ್ರ ಸರ್ಕಾರ ತಿಳಿಸಿದೆ. ಅಲ್ಲದೆ, ಅಡುಗೆ ಅನಿಲ ಪರಿಷ್ಕರಣಾ ಕಂಪನಿಗಳಿಗೆ ಅಡುಗೆ ಅನಿಲದ ಉತ್ಪಾದನೆಯನ್ನು ಕೂಡ ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಇದನ್ನೂ ಓದಿ : ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದ ಆರೋಪ | ಸಮತಾ ಸೈನಿಕ ದಳದಿಂದ ಪ್ರತಿಭಟನೆ



















