ನವದೆಹಲಿ: ಭಾರತದಲ್ಲಿ ಹೆಚ್ಚು ಬಡವರಿದ್ದರೂ, ಶ್ರೀಮಂತರ ಸಂಖ್ಯೆ ದಿನೇದಿನೆ ಜಾಸ್ತಿಯಾಗುತ್ತಲೇ ಇದೆ. ಉದ್ಯಮಿಗಳು, ಹೂಡಿಕೆದಾರರು, ಸೆಲೆಬ್ರಿಟಿಗಳು ಸೇರಿ ನೂರಾರು ಜನ ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದಾರೆ. ನವೋದ್ಯಮಗಳೇ ಇಂದು ಸಾವಿರಾರು ಕೋಟಿ ರೂ. ವಹಿವಾಟು ಮಾಡುತ್ತಿವೆ. ಇದರ ಬೆನ್ನಲ್ಲೇ, ಭಾರತದಲ್ಲಿ ಶ್ರೀಮಂತರ ಕುರಿತು ನೈಟ್ ಫ್ರ್ಯಾಂಕ್ ಇಂಡಿಯಾ ವರದಿ ಬಿಡುಗಡೆ ಮಾಡಿದೆ. ವರದಿ ಪ್ರಕಾರ, ಭಾರತದಲ್ಲಿ 191 ಮಂದಿ ಶತಕೋಟ್ಯಧೀಶರಿದ್ದಾರೆ ಎಂದು ತಿಳಿದುಬಂದಿದೆ.
ನೈಟ್ ಫ್ರ್ಯಾಂಕ್ ಇಂಡಿಯಾ ಕಂಪನಿಯು 2025ರ ದಿ ವೆಲ್ತ್ ರಿಪೋರ್ಟ್ ಬಿಡುಗಡೆ ಮಾಡಿದೆ. ದೇಶದಲ್ಲಿ 2019ರಲ್ಲಿ ಕೇವಲ ಏಳುಮಂದಿ ಶತಕೋಟ್ಯಧೀಶರಿದ್ದರು. ಆದರೆ, ಈಗ ಅದು 191ಕ್ಕೆ ಏರಿಕೆಯಾಗಿದೆ. ಇನ್ನು 10 ಲಕ್ಷ ರೂಪಾಯಿಗಿಂತ (ಮಿಲಿಯನೇರ್) ಹೆಚ್ಚು ಹಣ ಇರುವವರ ಸಂಖ್ಯೆಯೂ ಶೇ.6ರಷ್ಟು ಜಾಸ್ತಿಯಾಗಿದೆ ಎಂದು ವರದಿ ತಿಳಿಸಿದೆ.
ದೇಶದಲ್ಲಿ ಶ್ರೀಮಂತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. 2028ರ ವೇಳೆಗೆ ದೇಶದ ಅತಿ ಸಿರಿವಂತರ ಸಂಖ್ಯೆ 93,753ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ನೈಟ್ ಫ್ರ್ಯಾಂಕ್ ಇಂಡಿಯಾ ವರದಿ ತಿಳಿಸಿದೆ. ಅಮೆರಿಕದಲ್ಲಿ ಬಿಲಿಯನೇರ್ ಗಳ ಒಟ್ಟು ಸಂಪತ್ತು 496 ಲಕ್ಷ ಕೋಟಿ ರೂ. ಇದ್ದರೆ, ಭಾರತದಲ್ಲಿ ಬಿಲಿಯನೇರ್ ಗಳ ಒಟ್ಟು ಸಂಪತ್ತು 82.70 ಲಕ್ಷ ಕೋಟಿ ರೂಪಾಯಿ ಇದೆ. ಚೀನಾದಲ್ಲಿಬಿಲಿಯನೆರ್ ಗಳ ಒಟ್ಟು ಸಂಪತ್ತು 116 ಲಕ್ಷ ಕೋಟಿ ರೂ. ಆಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತದಲ್ಲಿಜಾಗತಿಕ ಮಾರುಕಟ್ಟೆಗಾಗಿ ತಯಾರಿಕೆ, ಮೂಲಸೌಕರ್ಯ ಅಭಿವೃದ್ಧಿ, ತಂತ್ರಜ್ಞಾನಕ್ಕೆ ಸಂಬಂಧಿಸಿದ ನವೋದ್ಯಮಗಳು ಇತ್ಯಾದಿ ವಲಯಗಳಿಂದ ಹೊಸ ಅವಕಾಶಗಳು ಲಭ್ಯವಾಗುತ್ತಿವೆ. ಇದು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿದ್ದು, ದೇಶದಲ್ಲಿಸಂಪತ್ತು ಸೃಷ್ಟಿಗೆ ನೆರವಾಗಲಿದೆ. ಆ ಮೂಲಕ ದೇಶದಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಲಿದೆ ವರದಿ ತಿಳಿಸಿದೆ.