ಟಿ20 ವಿಶ್ವಕಪ್ ನ ಸೂಪರ್ 8ರ ಭಾರತ ಹಾಗೂ ಬಾಂಗ್ಲಾದೇಶ (IND vs BAN) ನಡುವೆ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ 50 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಈ ಮೂಲಕ ಮತ್ತೊಂದು ಪಂದ್ಯ ಬಾಕಿ ಇರುವಂತೆಯೇ ವಿಶ್ವಕಪ್ನ (T20 World Cup 2024) ಸೆಮಿಫೈನಲ್ ಗೆ ಬಹುತೇಕವಾಗಿ ಭಾರತ ತಂಡ ಎಂಟ್ರಿ ಕೊಟ್ಟಂತಾಗಿದೆ. ಭಾರತ ತಂಡ ಇಲ್ಲಿಯವರೆಗೆ 2 ಪಂದ್ಯಗಳನ್ನು ಆಡಿದ್ದು, ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಎರಡು ಪಂದ್ಯಗಳನ್ನು ಅತ್ಯುತ್ತಮ ನೆಟ್ ರನ್ ರೇಟ್ ನೊಂದಿಗೆ ಗೆದ್ದಿದೆ. ಹೀಗಾಗಿ ಭಾರತ ಸೆಮೀಸ್ಗೇರುವುದು ಬಹುತೇಕ ನಿಶ್ಚಿತವಾಗಿದೆ.
ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ (Team India) 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 146 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಈ ಮೂಲಕ ಬಾಂಗ್ಲಾ ತಂಡದ ಸೆಮಿಫೈನಲ್ ಕನಸು ಭಗ್ನಗೊಂಡಿತು.
ಭಾರತದ ಪರ ಎಲ್ಲ ಬ್ಯಾಟ್ಸ್ ಮನ್ ಗಳು ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಸೂರ್ಯಕುಮಾರ್ ಯಾದವ್ ಹೊರತುಪಡಿಸಿ ಉಳಿದವರೆಲ್ಲರೂ ಎರಡಂಕಿ ಮೊತ್ತ ಕಲೆ ಹಾಕಿದರು. ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡಿದರು.
ಉಪನಾಯಕ ಹಾರ್ದಿಕ್ ಪಾಂಡ್ಯ ಇನಿಂಗ್ಸ್ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಹಾರ್ದಿಕ್ 24 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಗಳ ನೆರವಿನಿಂದ ಅಜೇಯ 50 ರನ್ ಗಳಿಸಿದರು. ರೋಹಿತ್ ಶರ್ಮಾ 23, ವಿರಾಟ್ ಕೊಹ್ಲಿ 37, ರಿಷಬ್ ಪಂತ್ 36, ಸೂರ್ಯಕುಮಾರ್ ಯಾದವ್ 6 ಮತ್ತು ಶಿವಂ ದುಬೆ 34 ರನ್ ಗಳಿಸಿದರು.
ಬಾಂಗ್ಲಾದೇಶ ಪರ ರಿಷಾದ್ ಹೊಸೈನ್ ಮತ್ತು ತಂಜಿಮ್ ಹಸನ್ ಸಾಕಿಬ್ ತಲಾ 2 ವಿಕೆಟ್ ಪಡೆದರೆ, ಶಕೀಬ್ ಅಲ್ ಹಸನ್ 1 ವಿಕೆಟ್ ಪಡೆದರು. 197 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡ ಕೇವಲ 146 ರನ್ ಮಾತ್ರ ಗಳಿಸಿತು. ನಜ್ಮುಲ್ ಹುಸೇನ್ ಶಾಂಟೊ ತಂಡದ ಪರ ಗರಿಷ್ಠ 40 ರನ್ ಗಳಿಸಿದರೆ, ರಿಶಾದ್ ಹೊಸೈನ್ 24 ರನ್ ಗಳಿಸಿದರು. ಕುಲ್ದೀಪ್ ಯಾದವ್ 3, ಅರ್ಷದೀಪ್ ಸಿಂಗ್-ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದು ಮಿಂಚಿದರು.