ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಭಾರತೀಯ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಬಾಂಗ್ಲಾದೇಶ ತಂಡ 149 ರನ್ ಗಳಿಗೆ ಆಲೌಟ್ ಆಗಿದೆ.
ಈ ಮೂಲಕ ಭಾರತ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 227 ರನ್ ಗಳ ಬೃಹತ್ ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ರೋಹಿತ್ ಪಡೆ 376 ರನ್ ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 339 ರನ್ ಗಳಿಸಿದ್ದ ಟೀಂ ಇಂಡಿಯಾ ಎರಡನೇ ದಿನದಾಟದ ಮೊದಲ ಸೆಷನ್ ನಲ್ಲೇ ಕೇವಲ 37 ರನ್ ಕಲೆ ಹಾಕಿ ಉಳಿದ 4 ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ಆದರೆ, ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರ ಅಮೋಘ ಆಟದಿಂದಾಗಿ ಭಾರತ ತಂಡ ಉತ್ತಮ ರನ್ ಗಳಿಸುವಂತಾಯಿತು.
ಹೀಗಾಗಿ ಭಾರತ ತಂಡ 376 ರನ್ ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ಉತ್ತಮ ರನ್ ಕಲೆ ಹಾಕಲು ವಿಫಲವಾಯಿತು. 40 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಭಾರತದ ವೇಗಿಗಳ ದಾಳಿಗೆ ಬೆದರಿದ ಬಾಂಗ್ಲಾ ಬ್ಯಾಟರ್ ಗಳು ಪಟಪಟನೇ ಪೆವಿಲಿಯನ್ ಸೇರಿದರು. ನಾಯಕ ನಜ್ಮುಲ ಹುಸೈನ್ ಶಾಂಟೋ ಮಾತ್ರ 20 ರನ್ಗಳ ಎರಡಂಕಿ ಮೊತ್ತ ಕಲೆಹಾಕಿದರು. ಉಳಿದ ನಾಲ್ವರು ಕೇವಲ ಒಂದಂಕಿಗೆ ವಿಕೆಟ್ ಒಪ್ಪಿಸಿದರು.
6ನೇ ವಿಕೆಟ್ಗೆ ಜೊತೆಯಾದ ಅನುಭವಿ ಬ್ಯಾಟರ್ಗಳಾದ ಶಕೀಬ್ ಅಲ್ ಹಸನ್ ಹಾಗೂ ಲಿಟನ್ ದಾಸ್ 50 ರನ್ ಗಳ ಜೊತೆಯಾಟ ನೀಡಿದರು. ಬಾಂಗ್ಲಾ ಪರ ಶಕೀಬ್ ಅಲ್ ಹಸನ್ ಅತ್ಯಧಿಕ 32 ರನ್ ಗಳಿಸಿದರೆ, ಲಿಟನ್ ದಾಸ್ 22 ರನ್ ಗಳಿಸಿದರು. 27 ರನ್ಗಳ ಇನ್ನಿಂಗ್ಸ್ ಆಡಿದ ಆಲ್‌ರೌಂಡರ್ ಮೆಹದಿ ಹಸನ್ 149 ರನ್ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಭಾರತದ ಪರ ಜಸ್ಪ್ರೀತ್ ಬುಮ್ರಾ 11 ಓವರ್ ಗಳಲ್ಲಿ 50 ರನ್ ನೀಡಿ 4 ವಿಕೆಟ್ ಪಡೆದರು. ಈ ಮೂಲಕ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 400 ವಿಕೆಟ್ ಪೂರೈಸಿದ ಸಾಧನೆ ಮಾಡಿದರು. ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದು ಮಿಂಚಿದರು.