ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಕುರಿತು ಸುಳ್ಳು ಹಾಗೂ ಹಾದಿತಪ್ಪಿಸುವ ಮಾಹಿತಿಯನ್ನು ಬಿತ್ತರಿಸುತ್ತಿದ್ದ ಆರೋಪದ ಮೇರೆಗೆ ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಗ್ಲೋಬಲ್ ಟೈಮ್ಸ್‌ನ(Global Times) ಟ್ವೀಟರ್ (ಎಕ್ಸ್) ಖಾತೆಯನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನಾಪಡೆ ನಡೆಸಿದ ಕಾರ್ಯಾಚರಣೆ ಕುರಿತು ಸುಳ್ಳು ಮಾಹಿತಿ ಹಂಚಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತ ಸರ್ಕಾರ ತಿಳಿಸಿದೆ.
ಭಾರತದ ಸೇನಾ ಕಾರ್ಯಾಚರಣೆಯ ಬಗ್ಗೆ ಗ್ಲೋಬಲ್ ಟೈಮ್ಸ್ ಸುಳ್ಳೇ ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಿದ್ದ ಕಾರಣ ಇತ್ತೀಚೆಗಷ್ಟೇ ಆ ಸಂಸ್ಥೆಗೆ ಬೀಜಿಂಗ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೂ ಎಚ್ಚರಿಕೆ ನೀಡಿತ್ತು. ಟ್ವೀಟರ್ ನಲ್ಲೇ ಈ ಕುರಿತು ಪೋಸ್ಟ್ ಮಾಡಿದ್ದ ಭಾರತದ ರಾಯಭಾರ ಕಚೇರಿ, “ಡಿಯರ್ ಗ್ಲೋಬಲ್ ಟೈಮ್ಸ್ ನ್ಯೂಸ್, ಈ ರೀತಿಯ ಸುಳ್ಳು, ಹಾದಿ ತಪ್ಪಿಸುವ ಮಾಹಿತಿಯನ್ನು ಹಂಚಿಕೊಳ್ಳುವ, ಪ್ರಸಾರ ಮಾಡುವ ಮುನ್ನ ನಿಮ್ಮಲ್ಲಿರುವ ಅಂಕಿ-ಅಂಶ, ಸತ್ಯಾಂಶಗಳನ್ನು ದೃಢೀಕರಿಸಿಕೊಳ್ಳಿ ಮತ್ತು ನಿಮ್ಮ ಮೂಲಗಳನ್ನು ಮತ್ತೊಮ್ಮೆ ಪರಿಶೀಲಿಸಿ” ಎಂದು ಹೇಳಿತ್ತು.
ಇದಿಷ್ಟೇ ಅಲ್ಲದೆ, ಪಾಕಿಸ್ತಾನದ ಪರ ಮೃದು ಧೋರಣೆ ಹೊಂದಿರುವ ಹಲವು ಸಾಮಾಜಿಕ ಜಾಲತಾಣ ಖಾತೆಗಳು, ಭಾರತ ಮತ್ತು ಪಾಕಿಸ್ತಾನದ ನಡುವಿನ ದಾಳಿ-ಪ್ರತಿದಾಳಿಯಲ್ಲಿ ಭಾರತೀಯ ಸಶಸ್ತ್ರ ಪಡೆಗಳಿಗೆ ಆಗಿರುವ ನಷ್ಟಕ್ಕೆ ಸಂಬಂಧಿಸಿ ಹಲವು ತಿರುಚಿದ, ನಕಲಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿವೆ ಎಂದೂ ರಾಯಭಾರ ಕಚೇರಿ ಆರೋಪಿಸಿತ್ತು.
ಈ ಎಚ್ಚರಿಕೆಯ ಹೊರತಾಗಿಯೂ ಗ್ಲೋಬಲ್ ಟೈಮ್ಸ್ ಸುಳ್ಳು ಸುದ್ದಿಗಳ ಪ್ರಸಾರವನ್ನು ಮುಂದುವರಿಸಿದ ಕಾರಣ, ಭಾರತದಲ್ಲಿ ಆ ಸಂಸ್ಥೆಯ ಖಾತೆಯನ್ನೇ ಸ್ಥಗಿತಗೊಳಿಸಲಾಗಿದೆ.