ಗುವಾಹಟಿ : ಇಲ್ಲಿನ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಂದು ಭಾರತ 201 ರನ್‌ಗಳಿಸಿ ಆಲೌಟ್ ಆಗುವ ಮೂಲಕ 288 ರನ್ಗಳ ಹಿನ್ನಡೆಯೊಂದಿಗೆ ಇನ್ನಿಂಗ್ಸ್ ಮುಕ್ತಾಯಗೊಳಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 489 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿ ಆಲೌಟ್ ಆಯ್ತು.
ತಂಡದ ಪರ ಸೆನುರನ್ ಮುತ್ತುಸಾಮಿ 10 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 109 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರೇ, ಮಾರ್ಕೊ ಜಾನ್ಸನ್ 6 ಬೌಂಡರಿ ಮತ್ತು 7 ಸಿಕ್ಸರ್‌ಗಳೊಂದಿಗೆ 93 ರನ್ ಗಳಿಸಿ ಶತಕ ವಂಚಿತರಾದರು. ಭಾರತ ತಂಡದ ಪರ ಕುಲದೀಪ್ ಯಾದವ್ 4 ವಿಕೆಟ್ ಪಡೆದರೆ, ಬುಮ್ರಾ, ಸಿರಾಜ್ ಮತ್ತು ಜಡೇಜಾ ತಲಾ 2 ವಿಕೆಟ್ ಉರುಳಿಸಿದರು.
ಇದಕ್ಕೆ ಪ್ರತಿಯಾಗಿ 2ನೇ ದಿನದಂದು ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ 9/0 ಸ್ಕೋರ್ನೊಂದಿಗೆ ದಿನದಾಟ ಮುಗಿಸಿತು. ನಂತರ ಮೂರನೇ ದಿನ ಬ್ಯಾಟಿಂಗ್ಗೆ ಬಂದ ಯಶಸ್ವಿ ಜೈಸ್ವಾಲ್ (58) ಮತ್ತು ಕೆಎಲ್ ರಾಹುಲ್ (22) ಮೊದಲ ವಿಕೆಟ್‌ಗೆ 65 ರನ್ಗಳನ್ನು ಸೇರಿಸುವ ಮೂಲಕ ಇನ್ನಿಂಗ್ಸ್ ಸ್ಥಿರಗೊಳಿಸಿದರು. ಆದರೆ ಲಯಕ್ಕೆ ಮರಳುತ್ತಿದ್ದ ರಾಹುಲ್ ಕ್ಯಾಚೌಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಸಾಯಿ ಸುದರ್ಶನ್ (15) ಮತ್ತು ಧ್ರುವ್ ಜುರೆಲ್ (0) ಔಟಾದರು. ಸೈಮನ್ ಹಾರ್ಮರ್ ಎರಡು ವಿಕೆಟ್ ಪಡೆದರೆ, ಮಾರ್ಕೊ ಜಾನ್ಸೆನ್ ಮತ್ತು ಕೇಶವ್ ಮಹಾರಾಜ್ ತಲಾ ಒಂದು ವಿಕೆಟ್ ಪಡೆದರು.
ಎರಡನೇ ಸೆಷನ್ : ಎರಡನೇ ಸೆಷನ್‌ನಲ್ಲಿ 67 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 174 ರನ್ ಗಳಿಸಿತು. ಈ ಸೆಷನ್‌ನಲ್ಲಿ ಭಾರತ ಮತ್ತೆ 3 ವಿಕೆಟ್ ಕಳೆದುಕೊಂಡು 72 ರನ್ ಗಳಿಸಿತು. ಎರಡನೇ ಸೆಷನ್‌ನಲ್ಲಿ ರಿಷಭ್ ಪಂತ್ (7), ರವೀಂದ್ರ ಜಡೇಜಾ (6), ಮತ್ತು ನಿತೀಶ್ ಕುಮಾರ್ ರೆಡ್ಡಿ (10) ಔಟಾದರು. ಮೂರನೇ ಸೆಷನ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಸರ್ವಪತನ ಕಂಡಿತು. ಯಶಸ್ವಿ ಜೈಸ್ವಾಲ್ ಭಾರತದ ಪರ ಗರಿಷ್ಠ ಸ್ಕೋರರ್ ಆಗಿದ್ದರು. ಅವರು 97 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 58 ರನ್ ಗಳಿಸಿದರು. ಅವರಲ್ಲದೇ, ವಾಷಿಂಗ್ಟನ್ ಸುಂದರ್ 92 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 48 ರನ್ ಗಳಿಸಿದರು. ಆಫ್ರಿಕಾ ಪರ, ಮಾರ್ಕೊ ಜಾನ್ಸೆನ್ 6 ವಿಕೆಟ್ ಮತ್ತು ಸೈಮನ್ ಹಾರ್ಮರ್ 3 ವಿಕೆಟ್ ಪಡೆದರು.
ಸದ್ಯ ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್ ಆರಂಭಿಸಿದೆ. ರಿಯಾನ್ ರಿಕಲ್ಟನ್ (13) ಐಡೆನ್ ಮಾಕ್ರಾಮ್ (12) ಇನ್ನಿಂಗ್ಸ್ ಆರಂಭಿಸಿದ್ದಾರೆ. ಮೂರನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 26 ರನ್ ಕಲೆಹಾಕಿ 314 ರನ್ಗಳ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ : ಪಾಕ್ ಅರೆಸೇನಾ ಪಡೆಯ ಪ್ರಧಾನ ಕಚೇರಿ ಮೇಲೆ ಆತ್ಮಾಹುತಿ ಬಾಂಬ್ ದಾಳಿ | 6 ಮಂದಿ ಸಾವು



















