ರಾಂಚಿ: ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡಿರುವ ಟೀಮ್ ಇಂಡಿಯಾ, ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ (IND vs SA ODI) ಸಜ್ಜಾಗಿದೆ. ಗಾಯದ ಸಮಸ್ಯೆಯಿಂದ ನಾಯಕ ಶುಭಮನ್ ಗಿಲ್ ಸರಣಿಯಿಂದ ಹೊರಗುಳಿದಿದ್ದು, ಕೆ.ಎಲ್. ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ನಡುವೆ, ರೋಹಿತ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸಲು ಯಶಸ್ವಿ ಜೈಸ್ವಾಲ್ ಮತ್ತು ಋತುರಾಜ್ ಗಾಯಕ್ವಾಡ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ, ಲಭ್ಯ ಮಾಹಿತಿಗಳ ಪ್ರಕಾರ ಜೈಸ್ವಾಲ್ ಅವರಿಗೇ ಮೊದಲ ಆಧ್ಯತೆ ಸಿಗುವ ಸಾಧ್ಯತೆ ದಟ್ಟವಾಗಿದೆ.
ಜೈಸ್ವಾಲ್‌ಗೆ ಮಣೆ ಏಕೆ?
ಆಸ್ಟ್ರೇಲಿಯಾ ಪ್ರವಾಸದ ನಂತರ ಜೈಸ್ವಾಲ್ ಏಕದಿನ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಬಲಗೈ ಬ್ಯಾಟರ್ ಆಗಿರುವುದರಿಂದ, ಎಡಗೈ ಬ್ಯಾಟರ್ ಆಗಿರುವ ಜೈಸ್ವಾಲ್ ಅವರ ಸೇರ್ಪಡೆ ತಂಡಕ್ಕೆ ಉತ್ತಮ ಸಂಯೋಜನೆ ನೀಡುತ್ತದೆ. ಅಲ್ಲದೆ, ಈ ಜೋಡಿ ಈ ಹಿಂದೆ ಟಿ20 ಕ್ರಿಕೆಟ್‌ನಲ್ಲಿ ಒಟ್ಟಿಗೆ ಇನಿಂಗ್ಸ್ ಆರಂಭಿಸಿದ ಅನುಭವವನ್ನೂ ಹೊಂದಿದೆ. ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಕೂಡ ಜೈಸ್ವಾಲ್ ಪರ ಬ್ಯಾಟ್ ಬೀಸಿದ್ದು, “ಋತುರಾಜ್ ಸಾಕಷ್ಟು ರನ್ ಗಳಿಸಿದ್ದರೂ, ಜೈಸ್ವಾಲ್ ಅವರಿಗೆ ಮೊದಲು ಅವಕಾಶ ಸಿಗಬೇಕು. ಅವರು ರೋಹಿತ್ ಜೊತೆ ಇನಿಂಗ್ಸ್ ಆರಂಭಿಸುವುದನ್ನು ನಾನು ನೋಡುತ್ತಿದ್ದೇನೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಋತುರಾಜ್‌ಗೆ ನಿರಾಸೆ?
ಮತ್ತೊಂದೆಡೆ, ಋತುರಾಜ್ ಗಾಯಕ್ವಾಡ್ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧದ ಸರಣಿಯಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು (201 ರನ್). ದೇಶಿ ಕ್ರಿಕೆಟ್‌ನಲ್ಲೂ ಉತ್ತಮ ಲಯದಲ್ಲಿದ್ದಾರೆ. ಆದಾಗ್ಯೂ, ತಂಡದ ಸಮತೋಲನ ಮತ್ತು ಎಡಗೈ-ಬಲಗೈ ಕಾಂಬಿನೇಷನ್ ದೃಷ್ಟಿಯಿಂದ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವುದು ಕಷ್ಟ ಎನ್ನಲಾಗುತ್ತಿದೆ.
ಗಿಲ್, ಅಯ್ಯರ್ ಚೇತರಿಕೆ
ಗಾಯಗೊಂಡಿರುವ ನಾಯಕ ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಮಾಹಿತಿ ನೀಡಿದ್ದಾರೆ. ಸದ್ಯ ಇವರಿಬ್ಬರೂ ಬೆಂಗಳೂರಿನ ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ. ಗಿಲ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಕೆ.ಎಲ್. ರಾಹುಲ್ ಹೆಗಲೇರಿದೆ.
ಭಾರತದ ಸಂಭಾವ್ಯ XI:
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ನಾಯಕ), ರಿಷಭ್ ಪಂತ್ (ವಿ.ಕೀ), ನಿತೀಶ್ ರೆಡ್ಡಿ/ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: WPL 2026 ವೇಳಾಪಟ್ಟಿ ಪ್ರಕಟ : ಜನವರಿ 9ಕ್ಕೆ ಮುಂಬೈ vs ಆರ್‌ಸಿಬಿ ಕಾದಾಟ ; ಸಂಪೂರ್ಣ ವಿವರ ಇಲ್ಲಿದೆ



















