ಬೆಂಗಳೂರು: ಮಾರ್ಚ್ 31ಕ್ಕೆ ಹಣಕಾಸು ವರ್ಷ ಮುಗಿಯಲಿದೆ. ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷಕ್ಕೆ ನಾವೆಲ್ಲ ಕಾಲಿಡುತ್ತಿದ್ದೇವೆ. ಇದರ ಮಧ್ಯೆಯೇ, ಮುಂದಿನ ತಿಂಗಳಿಂದ ಹೊಸ ಹಣಕಾಸು ನಿಯಮಗಳು ಜಾರಿಯಾಗಲಿವೆ. ಅದರಲ್ಲೂ, ಹೊಸ ಆದಾಯ ತೆರಿಗೆ ಕಾಯ್ದೆ, ಟಿಡಿಎಸ್ ಬಡ್ಡಿ ಆದಾಯದ ಮಿತಿ ಹೆಚ್ಚಳ ಸೇರಿ ಹಲವು ನಿಯಮಗಳು ಬದಲಾಗಲಿವೆ. ಹಾಗಾದರೆ, ಏಪ್ರಿಲ್ 1ರಿಂದ ಯಾವೆಲ್ಲ ನಿಯಮಗಳು ಬದಲಾಗಲಿವೆ? ಇದರಿಂದ ಜನರಿಗೆ ಏನೆಲ್ಲ ಲಾಭಗಳಿವೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
60 ವರ್ಷಗಳಷ್ಟು ಹಳೆಯದಾದ 1961ರ ಕಾಯ್ದೆಯ ಬದಲಿಗೆ ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ. ಹೊಸ ಕಾಯ್ದೆ ಜಾರಿಗೆ ಬಂದರೂ ಹಳೆಯ ತೆರಿಗೆ ಸ್ಲ್ಯಾಬ್ ಗಳೇ ಮುಂದುವರಿಯಲಿವೆ. ಆದರೆ, ಪ್ರೀವಿಯಸ್ ಇಯರ್, ಅಸೆಸ್ ಮೆಂಟ್ ಇಯರ್ ಬದಲಾಗಿ, ಟ್ಯಾಕ್ಸ್ ಇಯರ್ ಎಂಬ ಏಕರೂಪದ ಪದ ಬಳಸಲಾಗುತ್ತದೆ. ಇದರಿಂದಾಗಿ ಐಟಿಆರ್ ಸಲ್ಲಿಸುವವರಿಗೆ ಹೆಚ್ಚಿನ ಗೊಂದಲ ಇರುವುದಿಲ್ಲ.
ಬಡ್ಡಿ ಆದಾಯದ ಮೇಲಿನ ಟಿಡಿಎಸ್ ಮಿತಿ ಹೆಚ್ಚಳ
ಬ್ಯಾಂಕ್ ಬಡ್ಡಿ ಮೂಲಕ ಗಳಿಸುವ ಹಣದ ಮೇಲಿನ ಟಿಡಿಎಸ್ ಮಿತಿಯನ್ನು ಏರಿಕೆ ಮಾಡಲಾಗಿದ್ದು, ಎಲ್ಲರಿಗೂ ಇದರ ಪ್ರಯೋಜನ ಸಿಗಲಿದೆ. ಹಿರಿಯ ನಾಗರಿಕರಿಗೆ ಬ್ಯಾಂಕ್ ಬಡ್ಡಿ ಆದಾಯದ ಮೇಲಿನ ಟಿಡಿಎಸ್ ಮಿತಿಯನ್ನು 50 ಸಾವಿರ ರೂ.ನಿಂದ 1 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಅದೇ ರೀತಿ, ಸಾಮಾನ್ಯ ನಾಗರಿಕರಿಗೆ ಬ್ಯಾಂಕ್ ಬಡ್ಡಿ ಮೇಲಿನ ಟಿಡಿಎಸ್ ಮಿತಿ 40 ಸಾವಿರ ರೂ.ನಿಂದ 50 ಸಾವಿರ ರೂ.ಗೆ ಏರಿಕೆಯಾಗಿದೆ. ಡಿವಿಡೆಂಡ್ (ಲಾಭಾಂಶ) ಆದಾಯದ ಮೇಲಿನ ಟಿಡಿಎಸ್ ಮಿತಿಯನ್ನು 5 ಸಾವಿರ ರೂ.ನಿಂದ 10 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ.
ಐಟಿಆರ್ ಸಲ್ಲಿಕೆ ದಿನಾಂಕ ವಿಸ್ತರಣೆ
ಆಡಿಟ್ ಅಗತ್ಯವಿಲ್ಲದ ತೆರಿಗೆದಾರರಿಗೆ (ITR-3 ಮತ್ತು ITR-4) ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕವನ್ನು ಜುಲೈ 31 ರಿಂದ ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ. ಐಟಿಆರ್ ಸಲ್ಲಿಸುವವರಿಗೆ ಇದರಿಂದ ಅನುಕೂಲವಾಗಲಿದೆ. ಅಲ್ಲದೆ, ಡಿವಿಡೆಂಡ್ ಅಥವಾ ಮ್ಯೂಚುವಲ್ ಫಂಡ್ ಯುನಿಟ್ ಮಾರಾಟದ ಮೂಲಕ ಆದಾಯ ಗಳಿಸಲು ಪಡೆದ ಸಾಲದ ಮೇಲಿನ ಬಡ್ಡಿಯನ್ನು ಇನ್ನುಮುಂದೆ ಕಡಿತ ಮಾಡಲು ಅವಕಾಶವಿರುವುದಿಲ್ಲ. ಪೂರ್ಣ ಮೊತ್ತಕ್ಕೆ ಸ್ಲ್ಯಾಬ್ ದರದಂತೆ ತೆರಿಗೆ ಪಾವತಿಸಬೇಕು. ಹಳೆಯ ವಿಧಾನದಲ್ಲಿದ್ದ ಶೇ.20ರಷ್ಟು ಕಡಿತದ ಸೌಲಭ್ಯ ಸಿಗುವುದಿಲ್ಲ.
ಇದನ್ನೂ ಓದಿ : ಬೇಕಾಬಿಟ್ಟಿಯಾಗಿ ಆಧಾರ್ ಕಾರ್ಡ್ ಹೆಸರು ಬದಲಾವಣೆ ಸಾಧ್ಯವಿಲ್ಲ – ಈ ನಿಯಮ ತಿಳಿಯಿರಿ



















