ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿಯ ನಂತರ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಆದಾಯ ಕೂಡ ಹೆಚ್ಚಾಗಿದೆ ಎನ್ನಲಾಗಿದೆ.
1024 ಸಾವಿರ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ದಕ್ಷಿಣ ಭಾರತದ ಅತಿ ದೊಡ್ಡ ಸಂರಕ್ಷಿತ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ 191ಕ್ಕೂ ಅಧಿಕ ಹುಲಿಗಳು, 1,116 ಕ್ಕೂ ಅಧಿಕ ಆನೆಗಳು ಇವೆ. ಅಲ್ಲದೇ, ಚಿರತೆ, ಕರಡಿ, ಜಿಂಕೆ, ಕಾಡೆಮ್ಮೆ ಸೇರಿದಂತೆ ಬೇರೆ ಬೇರೆ ಬಗೆಯ ವನ್ಯ ಜೀವಿಗಳಿವೆ.
ಈ ಅರಣ್ಯ ಪ್ರದೇಶಕ್ಕೆ ಇತ್ತೀಚೆಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದರು. ಅವರ ಭೇಟಿ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಪರಿಸರ ಪ್ರವಾಸೋದ್ಯಮವು ಸಾಕಷ್ಟು ಅಭಿವೃದ್ಧಿಯಾಗಿದೆ. ಸಫಾರಿ ಹಾಗೂ ಹಸಿರು ಪ್ರವೇಶ ಶುಲ್ಕದಿಂದ 2023-24 ನೇ ಸಾಲಿನಲ್ಲಿ 19 ಕೋಟಿ ರೂ. ಆದಾಯ ಹರಿದು ಬಂದಿತ್ತು. ಈ ಬಾರಿ ಅಂದರೆ 2024-25 ನೇ ಸಾಲಿನಲ್ಲಿ 22 ಕೋಟಿ ರೂ. ಗೂ ಅಧಿಕ ಆದಾಯದ ನಿರೀಕ್ಷೆ ಇದೆ ಎಂದು ಡಿಸಿಎಫ್ ಪ್ರಭಾಕರನ್ ಹೇಳಿದ್ದಾರೆ.