ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದಿನಿಂದ ಚಾಲನೆ ಸಿಕ್ಕಿತು. ಸಾಹಿತಿ ಹಂಪ ನಾಗರಾಜಯ್ಯ ಅವರು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿರೋಧ ಪಕ್ಷಗಳಿಗೆ ಅವರು ಕಿವಿ ಮಾತು ಹೇಳಿದ್ದಾರೆ. ಸರ್ಕಾರ ಉರುಳಿಸುವ ಕಾರ್ಯವನ್ನು ಯಾವುದೇ ಕಾರಣಕ್ಕೂ ವಿರೋಧ ಪಕ್ಷಗಳು ಮಾಡಬಾರದು. ಸೋತ ಪಕ್ಷ ಅಧಿಕಾರಕ್ಕೆ ಬರಲು 5 ವರ್ಷ ಸಮಯವಿದೆ. ಆದರೆ, ಸರ್ಕಾರ ಉರುಳಿಸುವುದನ್ನೇ ಕಾಯಕ ಮಾಡಿಕೊಳ್ಳಬಾರದು ಎಂದು ಈ ವೇಳೆ ಸಾಹಿತಿ ಸಲಹೆ ನೀಡಿದ್ದಾರೆ.
ಯುವಕರು ಮೋದಿ ಮೋದಿ ಎಂದು ಮುಂದುವರಿಯುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಸರ್ಕಾರ ಅಸ್ಥಿರಗೊಳಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದರು. ದಸರಾ ಧರ್ಮಗಳ ತಾರತಮ್ಯ ಇಲ್ಲದ ಸರ್ವ ಜನಾಂಗದ ಹಬ್ಬ. ಆಸ್ತಿಕತೆ, ನಾಸ್ತಿಕತೆ ಎಂಬುವುದು ದಸರಾ ಸಂದರ್ಭದಲ್ಲಿ ಅಪ್ರಸ್ತುತ. ದಸರಾ ಅರಮನೆ ಹಬ್ಬವಲ್ಲ, ಜನ ಆರಿಸಿದ ಸರ್ಕಾರ ನಡೆಸುವ ಹಬ್ಬ ಎಂದಿದ್ದಾರೆ.
ಈ ಸರ್ಕಾರಕ್ಕೆ ಎಷ್ಟೇ ಆತಂಕಗಳು ಬಂದರೂ ಸಿಎಂ ಸೇರಿದಂತೆ ಅವರ ಮಂತ್ರಿ ಮಂಡಲ ಸೆಡ್ಡು ಹೊಡೆದು ನಿಂತಿದೆ. ಜೀವನವೇ ದೊಡ್ಡ ಅಖಾಡ, ಧೃತಿಗೆಡದೆ ತೊಡೆತಟ್ಟಿ ನಿಲ್ಲಲೇಬೇಕು. ಸಜ್ಜನಿಕೆ, ಸೌಮ್ಯ ಸ್ವಭಾವ ದೌರ್ಬಲ್ಯವಲ್ಲ ಎಂದು ಕಿವಿ ಮಾತು ಹೇಳಿದ್ದಾರೆ. ದಸರಾ ಎಂದರೆ, ಮೈಸೂರು. ಮೈಸೂರು ಎಂದರೆ ದಸರಾ ಎಂದು ಬಣ್ಣಿಸಿದರು.