ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕು ಸಾಗಿಸಲು ಶ್ರೀರಾಮನಾ ಆದರ್ಶ ಪಾಲಿಸುವಂತೆ ಯುವಕರಿಗೆ ಆದಿ ಚುಂಚನಗಿರಿ ಮಹಾ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದ್ದಾರೆ.
ಬೆಂಗಳೂರಿನ ರಾಜಾಜಿನಗರದ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಸೇವಾ ಮಂಡಳಿಯಿಂದ ಕರ್ನಾಟಕದಲ್ಲೇ ಅತಿ ಎತ್ತರದ 63 ಅಡಿ ಉದ್ದದ ಶ್ರೀರಾಮಾಂಜನೇಯ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಯುವಕರು ರಾಮನ ಆದರ್ಶವನ್ನು ಪಾಲಿಸಿದಾಗ ಮಾತ್ರ ಉತ್ತಮ ಪ್ರಜೆಯಾಗಲು ಸಾಧ್ಯ. ಆಗ ನೆಮ್ಮದಿಯ ಸಮಾಜ ನಿರ್ಮಾಣವಾಗಲಿದೆ. ಅದು ರಾಮ ರಾಜ್ಯವಾಗುತ್ತದೆ ಎಂದಿದ್ದಾರೆ.
ಮನುಷ್ಯನ ಜೀವನ ಮೌಲ್ಯಯುತವಾಗಿ ಬದುಕಲು ಮತ್ತು ಲೋಕದಲ್ಲಿ ಜನರು ಆದರ್ಶವಾಗಿ ಜೀವನ ಸಾಗಿಸಲು ಶ್ರೀರಾಮ ಆದರ್ಶ ಆಳವಡಿಸಿಕೊಳ್ಳಿ. ಹಿಂದೂ ಸಮಾಜ ಸಂರಕ್ಷಣೆಯ ಸಂಘಟನೆ ಒಗ್ಗಟ್ಟಾಗಿ ಧರ್ಮ ಕಾರ್ಯಗಳನ್ನು ಆಯೋಜಿಸುತ್ತಿರಬೇಕು ಎಂದು ಸಲಹೆ ನೀಡಿದ್ದಾರೆ.
ಪಿತೃವಾಕ್ಯ ಪರಿಪಾಲಕ, ಆದರ್ಶ ಪತಿ ಶ್ರೀರಾಮ, ಮಾರ್ಯಾದ ಪುರಷೋತ್ತಮ ಎಂದು ಕರೆಯುತ್ತಾರೆ. ಅಂದರೆ ಜೀವನದಲ್ಲಿ ಯುವಕರು ತಂದೆ, ತಾಯಿಗೆ ಉತ್ತಮ ಮಗನಾಗಿ ಮತ್ತು ಸತಿಗೆ ಉತ್ತಮ ಪತಿಯಾಗಿ, ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಜೀವನ ಸಾಗಿಸಬೇಕು ಎಂದಿದ್ದಾರೆ.
ಉಡುಪಿ ಪೇಜಾವರ ಮಠದ ಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಭಕ್ತರೆಲ್ಲ ಕೂಡಿಕೊಂಡು ಉತ್ತಮ ಕೆಲಸ ಮಾಡಿದ್ದರ ಪರಿಣಾಮವಾಗಿ ದೇಶದಲ್ಲಿ ರಾಮ ಮಂದಿರ ನಿರ್ಮಾಣವಾಯಿತು. ಪ್ರಭು ಶ್ರೀರಾಮ, ಅಂಜನೇಯ ದೇವರುಗಳಿಗೆ, ಕರ್ನಾಟಕಕ್ಕೂ ಅವಿನಾಭವ ಸಂಬಂಧವಿದೆ. ಶ್ರೀರಾಮನಾ ಆಡಳಿತ, ಗುಣ, ಮನಸ್ಸು, ಪಿತೃವಾಕ್ಯ ಪರಿಪಾಲನೆ, ಕುಟುಂಬ ಸಂಭಂದ ಎಲ್ಲವೂ ಅವಿಸ್ಮರಣಿಯ. ಇದನ್ನ ಪ್ರತಿಯೊಬ್ಬರು ಆಳವಡಿಸಿಕೊಂಡರೆ ಪ್ರತಿಯೊಬ್ಬರ ಕುಟುಂಬ ನೆಮ್ಮದ್ದಿ, ಶಾಂತಿಯಿಂದ ಇರಲಿದೆ ಎಂದು ಹಾರೈಸಿದ್ದಾರೆ.
ಈ ವೇಳೆ ಸೌಮ್ಯನಾಥ ಸ್ವಾಮೀಜಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭ ಕರಾಂದ್ಲಾಜೆ, ಸಚಿವ ರಾಮಲಿಂಗಾರೆಡ್ಜಿ, ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷ ಶ್ರೀಧರ್, ಹೆಚ್.ಎಂ. ಕೃಷ್ಣಮೂರ್ತಿ, ಆರ್.ವಿ.ಹರೀಶ್, ಸಾವಿತ್ರಿ ಸುರೇಶ್ ಕುಮಾರ್, ಬಿಬಿಎಂಪಿ ಮಾಜಿ ಸದಸ್ಯರುಗಳಾದ ರಂಗಣ್ಣ, ಮೋಹನ್ ಕುಮಾರ್, ಮಂಜುನಾಥ್, ದೀಪ ನಾಗೇಶ್ ಸೇರಿದಂತೆ ಹಲವರು ಇದ್ದರು. ಶ್ರೀರಾಮಂಜನೇಯ ಮೂರ್ತಿ ನಿರ್ಮಾಣ ಮಾಡಿದ 29 ವರ್ಷದ ಯುವ ಶಿಲ್ಪಿ ಜೀವನ್ ಅವರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.