ಉಡುಪಿ : ಇಂದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ವಂಡ್ಸೆ ಗ್ರಾಮದಲ್ಲಿ ರಾಜ್ಯದ ಪ್ರಥಮ ಸಮುದಾಯ ಉಪಶಮನ ಆರೈಕೆ ಕೇಂದ್ರ ಲೋಕಾರ್ಪಣೆಗೊಂಡಿತು. ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಮುದಾಯ ಆರೈಕೆ ಕೇಂದ್ರ ಹಾಗೂ ಗ್ರಾಮೀಣ ಜೀವನೋಪಾಯ ತರಬೇತಿ ಕೇಂದ್ರಕ್ಕೆ ಚಾಲನೆಯನ್ನು ನೀಡಿದರು.

7 ಗ್ರಾಮ ಪಂಚಾಯಿತಿ, 40 ಸಾವಿರ ಜನರಿಗೆ ಸೇವೆ :
ಕೇರಳ ರಾಜ್ಯದಲ್ಲಿ ಜನ ಖ್ಯಾತಿಗಳಿಸಿರುವ ಸಮುದಾಯ ಉಪಶಮನ ಆರೈಕೆ ಕೇಂದ್ರ, ರಾಜ್ಯದಲ್ಲಿ ಪ್ರಥಮ ಬಾರಿಗೆ ವಂಡ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲೋಕಾರ್ಪಣೆಗೊಂಡಿದೆ. 7 ಗ್ರಾಮ ಪಂಚಾಯಿತಿ ಒಡಗೂಡಿ ನಿರಾಮಯ ಹೆಸರಿನಲ್ಲಿ ಸೊಸೈಟಿ ಮಾಡಿಕೊಂಡಿದ್ದು, ಈ ವ್ಯಾಪ್ತಿಯ 40 ಸಾವಿರ ಜನಸಂಖ್ಯೆಗೆ ಸಮುದಾಯ ಉಪಶಮನ ಆರೈಕೆ ಕೇಂದ್ರ ಸೇವೆ ಸಲ್ಲಿಸಲಿದೆ. ಇದರಲ್ಲಿ ನಾಲ್ವರು ತಜ್ಞ ವೈದ್ಯರು, ಇಬ್ಬರು ದಾದಿಯರು, ಅ್ಯಂಬುಲೆನ್ಸ್‌ಗಳು ಕಾರ್ಯ ನಿರ್ವಹಿಸಲಿದೆ.
ವಾರ್ಷಿಕ ವೆಚ್ಚ 55ಲಕ್ಷ, ಸರ್ಕಾರದ ನೆರವು 10 ಲಕ್ಷ :
ಮನೆಯಿಂದ ಹೊರಬರಲಾಗದ 284 ರೋಗಿಗಳನ್ನು ಈಗಾಗಲೇ ಗುರುತಿಸಿ ಅವರ ಮನೆಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. 73 ಮಂದಿ ಹಾಸಿಗೆ ಹಿಡಿದ ರೋಗಿಗಳ ಆರೈಕೆಯೂ ನಡೆಯುತ್ತಿದೆ. ಪ್ರಾರಂಭಿಕ ಹಂತದಲ್ಲಿ ಮನೆ ಮನೆಗೆ ಹೋಗಿ ಆರೈಕೆ ಮಾಡಿ, ನಂತರದ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸುವ ಮೂಲಕ ಸೇವೆ ವಿಸ್ತರಿಸಲು ಯೋಜನೆ ರೂಪಿಸಿದ್ದಾರೆ.

ಇನ್ನು, ವಾರ್ಷಿಕ ಸರಿ ಸುಮಾರು 55ಲಕ್ಷ ರೂ. ನಿರ್ವಹಣೆಗೆ ಬೇಕಾಗಿದ್ದು ಸರಕಾರದಿಂದ 10ಲಕ್ಷ ರೂ.ನೆರವು ಸಿಗಲಿದೆ. ವಂಡ್ಸೆ ಗ್ರಾಮ ಪಂಚಾಯಿತಿ ಈಗಾಗಲೇ ಹಲವು ಮೊದಲುಗಳಿಗೆ ಸಾಕ್ಷಿಯಾಗಿದ್ದು, ರಾಜ್ಯದ ಮಾಡೆಲ್ ಗ್ರಾಮ ಪಂಚಾಯಿತಿ ಆಗಿ ಗುರುತಿಸಿಕೊಂಡಿದೆ.
ಒಟ್ಟಿನಲ್ಲಿ ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸಿ, ಸಮುದಾಯದ ಆರೈಕೆ ಮಾಡುವಲ್ಲಿ ಯೋಜನೆ ಯಶಸ್ವಿಯಾಗಲಿ ಎನ್ನುವುದು ಕರ್ನಾಟಕ ನ್ಯೂಸ್ ಬೀಟ್‌ನ ಆಶಯ.
ಇದನ್ನೂ ಓದಿ : ಜಲಮಂಡಳಿ ನಿರ್ಲಕ್ಷ್ಯಕ್ಕೆ ಮ್ಯಾನ್ ಹೋಲ್‌ನಲ್ಲಿ ಕುಸಿದು ಬಿದ್ದ ಕಾರ್ಮಿಕರು | ಓರ್ವನ ಸ್ಥಿತಿ ಗಂಭೀರ!



















