ಮಂಗಳೂರು: ಧರ್ಮಸ್ಥಳದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್ ನ್ನು ಉಪರಾಷ್ಟ್ರಪತಿ ಲೋಕಾರ್ಪಣೆಗೊಳಿಸಿದ್ದಾರೆ.
ದಕ್ಷಿಣ ಕನ್ನಡದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿರುವ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಕಾಂಪ್ಲೆಕ್ಸ್ ಉದ್ಘಾಟಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ವಿಐಪಿ ಸಂಸ್ಕೃತಿ ಕೆಟ್ಟ ಸಂಸ್ಕೃತಿಯಲ್ಲಿ ಒಂದಾಗಿದೆ. ಸಮಾನತೆಯ ವಿರುದ್ಧದ ಸಂಸ್ಕೃತಿಯಾಗಿದೆ. ಧಾರ್ಮಿಕ ಸ್ಥಳ ಸೇರಿದಂತೆ ಸಮಾಜದ ಯಾವುದೇ ಸ್ಥಳಗಳಲ್ಲಿ ವಿಐಪಿ ಸಂಸ್ಕೃತಿಯಿರಬಾರದು. ವಿಐಪಿ ದರ್ಶನದ ಕಲ್ಪನೆಯು ದೈವತ್ವದ ವಿರುದ್ಧ ಹೋರಾಡುತ್ತದೆ ಎಂದು ಕಿವಿ ಮಾತು ಹೇಳಿದ್ದಾರೆ.

ಧಾರ್ಮಿಕ ಸಂಸ್ಥೆಗಳು ಸಮಾನತೆಯ ಕೇಂದ್ರಗಳಾಗಿದ್ದು, ಸರ್ವಶಕ್ತನಾದ ದೇವರ ಮುಂದೆ ಯಾವ ವ್ಯಕ್ತಿ ಮೇಲಲ್ಲ. ಹೀಗಾಗಿ ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು ಎನ್ನುವ ತತ್ವ ಪಾಲಿಸಬೇಕು ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಉಪರಾಷ್ಟ್ರತಿಗಳು ಪತ್ನಿ ಸುದೇಶ್ ಧನ್ಕರ್ ಜೊತೆಗೆ ಧರ್ಮಸ್ಥಳ ದೇವರ ದರ್ಶನ ಪಡೆದರು. ನಂತರ ಅಮೃತವರ್ಷಿಣಿ ಸಭಾಂಗಣದಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಹಲವರು ಇದ್ದರು.