ಬೆಂಗಳೂರು: ದಕ್ಷಿಣ ಭಾರತದ ಅತಿ ಎತ್ತರದ ರೋಡ್-ಕಮ್-ರೈಲು ಮೇಲ್ಸೇತುವೆ (Double-Deck Flyover) ರಾಗಿ ಗುಡ್ಡದಲ್ಲಿ (Ragigudda)ಸಿದ್ಧವಾಗಿದ್ದು, ಲೋಕಾರ್ಪಣೆಗೊಳ್ಳಲಿದೆ.
ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) 449 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಡಬ್ಬಲ್ ಡೆಕ್ಕರ್ ಫ್ಲೈ ಓವರ್ ಲೋಕಾರ್ಪಣೆ ಮಾಡಲಿದ್ದಾರೆ. ಈ ಡಬ್ಬಲ್ ಡೆಕ್ಕರ್ ಫ್ಲೈ ಓವರ್ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‌ವರೆಗೆ (Silk Board) ನಿರ್ಮಾಣವಾಗಿದೆ. ಡಬ್ಬಲ್ ಡೆಕ್ಕರ್ ಫ್ಲೈ ಓವರ್ ಎರಡೂ ಬದಿಗಳಲ್ಲಿ ಎರಡು ರಸ್ತೆ ಮಾರ್ಗ ನಿರ್ಮಿಸಲಾಗಿದ್ದು, ಇಲ್ಲಿ ಬಸ್ಸು, ಕಾರು ಸೇರಿ ಎಲ್ಲಾ ರೀತಿಯ ವಾಹನಗಳು ಸಂಚರಿಸಲಿವೆ. ಎರಡನೇ ಹಂತದ ಮಾರ್ಗದಲ್ಲಿ ಮೆಟ್ರೋ ರೈಲು (Metro Rail) ಸಂಚರಿಸಲಿದೆ. ಮೆಟ್ರೋ ಕಂಬಕ್ಕೆ ಎರಡೂ ಬದಿಯಲ್ಲಿ ರೆಕ್ಕೆಗಳ ರೀತಿಯಲ್ಲಿ ಈ ಸೇತುವೆ ಇದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್ (Silk Board) ಜಂಕ್ಷನ್ ನಲ್ಲಿ ವಾಹನ ದಟ್ಟಣೆ ಯಾವಾಗಲೂ ಹೆಚ್ಚಾಗಿರುತ್ತದೆ. ಮೇಲ್ಸೇತುವೆಯಿಂದ ಆಗುತ್ತಿದ್ದ ದಟ್ಟಣೆ ಕಡಿಮೆಯಾಗಲಿದೆ. 3.3 ಕಿಮೀವರೆಗೆ ತಡೆ ರಹಿತ ಸಂಚಾರವಿರಲಿದೆ. ಹೀಗಾಗಿ ಒಮ್ಮೆ ಫ್ಲೈ ಓವರ್ ಹತ್ತಿದರೆ 3.3 ಕಿಮೀವರೆಗೆ ಎಲ್ಲಿಯೂ ಇಳಿಯಲು ಅವಕಾಶವಿಲ್ಲ. ಎರಡು ಕಡೆ ಯೂ ಟರ್ನ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ರಾಗಿಗುಡ್ಡದಿಂದ ಸಿಎಸ್‌ಬಿ ಜಂಕ್ಷನ್‌ವರೆಗೆ ಹಳದಿ ಮಾರ್ಗದ ಮೆಟ್ರೋಗಾಗಿ ರಸ್ತೆ ಮೇಲ್ಸೇತುವೆಯ ಮೊದಲ ಹಂತವನ್ನು ಈಗಾಗಲೇ ನಿರ್ಮಿಸಲಾಗಿದೆ.