ವಿಜಯನಗರ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣ ಮಾಸುವ ಮುನ್ನವೇ ಈಗ ಪಕ್ಕದ ವಿಜಯನಗರದಲ್ಲೂ ಬಾಣಂತಿ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ.
ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಾಗಲಾಪೂರ ಗ್ರಾಮದ ಐಶ್ವರ್ಯ (20) ಸಾವನ್ನಪ್ಪಿರುವ ದುರ್ದೈವಿ ಬಾಣಂತಿ. ಸಿಸೇರಿಯನ್ ಮೂಲಕ ಹೆರಿಗೆಯಾಗಿ ಐದು ದಿನಗಳ ನಂತರ ಬಾಣಂತಿ ಸಾವಾಗಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತಳ ಪೋಷಕರು ಆಸ್ಪತ್ರೆ ಮುಂದೆ ಕಣ್ಣೀರು ಸುರಿಸಿದ್ದಾರೆ.
ಗರ್ಭಿಣಿ ಐಶ್ವರ್ಯ ಡಿಸೆಂಬರ್ 19 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಡಿಸೆಂಬರ್ 20 ರಂದು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಹೆಣ್ಣು ಮಗು ಜನನವಾಗಿತ್ತು. ಹೆರಿಗೆಯಾದ ನಂತರ ತಾಯಿ ಹಾಗೂ ಮಗು ರೋಗ್ಯವಾಗಿದ್ದರು. ಆನಂತರ ಮೂರು ದಿನಗಳ ನಂತರ ತಿಂಡಿ ಮಾಡಿದ ಬಳಿಕ ಬಾಣಂತಿ ಐಶ್ವರ್ಯಗೆ ಇದ್ದಕ್ಕಿದ್ದಂತೆ ವಾಂತಿ- ಭೇದಿ ಶುರುವಾಗಿದೆ.
ಆನಂತರ ವೈದ್ಯರು ಕೊಪ್ಪಳ ಜಿಲ್ಲಾಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಆದರೆ, ಕೊಪ್ಪಳ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.