ಬೆಂಗಳೂರು: ಯಾರೇ ಅಬಕಾರಿ ಸಚಿವರಿದ್ದಾಗಲೂ ಲಂಚ ಇದ್ದೇ ಇತ್ತು. ಆದರೆ, ಈಗ ಮಿತಿ ಮೀರಿದೆ ಎಂದು ಮದ್ಯವರ್ತಕರ ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ. ಅಲ್ಲದೇ, ಲಂಚದ ವಿರುದ್ಧ ಹೋರಾಟ ನಡೆಸಲು ನ. 20ರಂದು ರಾಜ್ಯದ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಪ್ರತಿಯೊಂದು ಮದ್ಯದಂಗಡಿಯಿಂದ ಹಿಡಿದು ಎಲ್ಲಾ ಜಿಲ್ಲೆಗಳಿಂದ ಹಣ ಫಿಕ್ಸ್ ಮಾಡಲಾಗಿದೆ. ವೈನ್ ಶಾಪ್ ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳು, ಮದ್ಯದ ವರ್ತಕರು ಸೇರಿದಂತೆ ಇಂತಿಷ್ಟು ಹಣ ಎಂದು ಫಿಕ್ಸ್ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಅಲ್ಲದೆ, ಅಬಕಾರಿ ಇಲಾಖೆಯ ಅಧಿಕಾರಿಗಳಿಂದ 16 ಕೋಟಿ ರೂ.ಗಳಷ್ಟು ವಸೂಲಿ ಮಾಡಲಾಗುತ್ತಿದೆ ಎಂದು ಸಂಘದವರು ಆರೋಪಿಸಿದ್ದಾರೆ.
ಪ್ರತಿ ಮದ್ಯದಂಗಡಿ ಪರವಾನಗಿಗೆ ರೂ. 30-70 ಲಕ್ಷ ರೂ.ವರೆಗೆ ಲಂಚ ಕೇಳಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಅಷ್ಟು ಲಂಚ ಕೊಟ್ಟ ನಂತರವೇ, ಸಚಿವರು CL7 ಬಾರ್ ಪರವಾನಗಿಗಳನ್ನು ನೀಡಿದ್ದಾರೆ ಎಂದು ಕೂಡ ಆರೋಪಿಸಿದ್ದಾರೆ. ಇದಕ್ಕೆ ಸರ್ಕಾರ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.