ಬೆಂಗಳೂರು: ಮುಂದಿನ ಬಜೆಟ್ನಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಮಹಾತ್ಮ ಗಾಂಧಿ ಹೆಸರಿಡುವ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳೊದ್ದಾರೆ
ನರೇಗಾಗೆ ತಿದ್ದುಪಡಿ ತಂದು ವಿಬಿ ಜಿ ರಾಮ್ ಜಿ ಯೋಜನೆ ಜಾರಿಗೊಳಿಸಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಫ್ರೀಡಂ ಪಾರ್ಕ್ನಲ್ಲಿ ಇಂದು ಆಯೋಜಿಸಿದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಿಎಂ, ವಿಬಿ ಜಿ ರಾಮ್ ಜಿ ಕಾಯ್ದೆ ದುರುದ್ದೇಶಪೂರ್ವಕ. ರಾಮ್ ಬರುವಂತೆ ವಿಬಿ ಜಿ ರಾಮ್ ಜಿ ಹೆಸರಿಟ್ಟಿದ್ದಾರೆ. ಆದರೆ ಅಲ್ಲಿ ದಶರಥ ರಾಮ ಇಲ್ಲ, ಸೀತಾ ರಾಮ ಇಲ್ಲ, ಕೌಶಲ್ಯ ರಾಮ ಇಲ್ಲ. ಮನಮೋಹನ್ ಸಿಂಗ್ ಅನೇಕ ವಿಚಾರಗಳಿಗೆ, ಸಮಸ್ಯೆಗಳಿಗೆ ಪರಿಹಾರ ಕೊಡುವ ಕಾಯ್ದೆಗಳನ್ನು ಮಾಡಿದ್ದರು. ಬಡವರು, ಮಹಿಳೆಯರಿಗೆ ಕಾರ್ಯಕ್ರಮ ರೂಪಿಸೋದು ಕಾಂಗ್ರೆಸ್ ಮಾತ್ರ. ಆದರೆ ಬಿಜೆಪಿಯವರು ಅದನ್ನು ನಾಶ ಮಾಡುತ್ತಾರೆ. ಹಳ್ಳಿಗಾಡಿನಲ್ಲಿ ಉದ್ಯೋಗ ಸಿಗದಂತೆ ಮಾಡಿದ್ದಾರೆ ಎಂದು ವಾಗ್ಧಾಳಿ ನಡೆಸಿದ್ದಾರೆ.

ಬಿಜೆಪಿಯವರಿಗೆ ಆರ್‌ಎಸ್‌ಎಸ್ ಮಾರ್ಗದರ್ಶನ ಮಾಡ್ತಾರೆ. ಯಾಕಂದ್ರೆ ಬಡವರಿಗೆ ಹಣಕಾಸು ಸಿಗಬಾರದು, ಬಡವರು ಸೇವಕರಾಗಿಯೇ ಇರಬೇಕೆಂದು ಅವರ ಬಯಕೆ. ಬಡವರು, ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಇದ್ದ ಜಾಗದಲ್ಲೇ ಉದ್ಯೋಗ ಪಡೆಯಬಹುದಾಗಿತ್ತು. ಗ್ರಾಮ ಪಂಚಾಯ್ತಿಗಳಿಗೆ ಕೊಟ್ಟ ಅಧಿಕಾರ ಕಸಿದಿದ್ದಾರೆ. ಈಗ ಪಂಚಾಯ್ತಿಗಳ ಅಧಿಕಾರ ದಿಲ್ಲಿಗೆ ಹೋಗಿದೆ. ಕೆಲಸವನ್ನು ತೀರ್ಮಾನ ಮಾಡೋದು ಈಗ ದಿಲ್ಲಿಯಲ್ಲಿ. ಅವರು ಆಯ್ಕೆ ಮಾಡುವ ಪಂಚಾಯ್ತಿಗಳಲ್ಲಿ ಮಾತ್ರ ಕೆಲಸ ಸಿಗುತ್ತದೆ. ದಿಲ್ಲಿಯವರು ಹೇಳಿದಂತೆ ಕೆಲಸ ಮಾಡಬೇಕು ಎಂದು ಕಿಡಿಕಾರಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಯಾರಿಗೆ ಕೂಲಿ ಇಲ್ಲ ಉದ್ಯೋಗ ಇಲ್ಲ ಅವರಿಗೆ ಉದ್ಯೋಗ ಕೊಟ್ಟಿದ್ದು ಸೋನಿಯಾ ಗಾಂಧಿ ನೇತೃತ್ವದಲ್ಲಿ ಮನಮೋಹನ್ ಸಿಂಗ್ ಸರ್ಕಾರ. ವಿಶ್ವ ಬ್ಯಾಂಕ್ ನರೇಗಾ ಯೋಜನೆ ಅತ್ಯುತ್ತಮ ಯೋಜನೆ ಅಂತ ಸರ್ಟಿಫಿಕೇಟ್ ಕೊಟ್ಟಿತ್ತು. ಗಾಂಧಿ ಹೆಸರನ್ನು ತೆಗೆದುಹಾಕಿ ಹೊಸ ರೂಪ ನೀಡಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಯವರು ಗ್ರಾಮೀಣ ಜನರಿಗೆ ರೋಗ ತರುತ್ತಿದೆ. ನಾವು ಜೈಲಿಗೆ ಹೋಗೋದಕ್ಕೂ ರೆಡಿ ಇದ್ದೇವೆ. ನರೇಗಾ ಯೋಜನೆಗಾಗಿ ಸಚಿವರೆಲ್ಲ ಜೈಲಿಗೆ ಹೋಗುತ್ತೇವೆ. ಕುಮಾರಸ್ವಾಮಿ ಏನೋ ಮಾತಾಡ್ತಾನೆ, ಬರಲಿ ಚರ್ಚೆಗೆ. ನಾನು ಚರ್ಚೆಗೆ ಸಿದ್ದ ಇದ್ದೇನೆ. ಒಬ್ರೋ ಇಬ್ರೋ ತಪ್ಪು ಮಾಡ್ತಾರೆ ಅಂತ ಮೂಗನ್ನೇ ಕೊಯ್ಯೋದಕ್ಕಾಗುತ್ತಾ?. 6 ಸಾವಿರ ಗ್ರಾಮ ಪಂಚಾಯತ್ಗಳಿಗೆ ಮಹಾತ್ಮ ಗಾಂಧಿ ಹೆಸರನ್ನು ಇಡಬೇಕು ಅಂತ ಸಲಹೆ ಬಂದಿದೆ. ಇದು ಕಾಂಗ್ರೆಸ್ ಪಕ್ಷದ ತೀರ್ಮಾನ ಎಎಂದಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಬಿಜೆಪಿ ಸರ್ಕಾರ ಬಡವರ, ಆದಿವಾಸಿಗಳ, ಹಿಂದುಳಿದವರ, ದಲಿತರ ಕೆಲಸ ಕಸಿದುಕೊಳ್ಳುತ್ತಿದೆ. ಬಡವರ ಅನ್ನಕ್ಕೆ ಕನ್ನ ಹಾಕಿದೆ. ಮನರೇಗಾ ಯೋಜನೆಯಿಂದ ಹಳ್ಳಿಯ ಜನರಿಗೆ ಕೆಲಸ ಮಾಡುವ ಹಕ್ಕು ನೀಡಲಾಗಿತ್ತು, ಆದರೆ ಅದನ್ನು ಕಸಿದುಕೊಳ್ಳಲಾಗಿದೆ. ಹೊಸ ಕಾಯ್ದೆಯಲ್ಲಿ 40% ರಾಜ್ಯ ಹಣ ನೀಡಬೇಕು ಎಂದು ಹೇಳಿದರು.
ಇದನ್ನೂ ಓದಿ : ಡಿಸಿಎಂ ಡಿಕೆಶಿ ತಲೆಗೆ ಪೇಟ ಕಟ್ಟಿದ ಸಿಎಂ ಸಿದ್ದರಾಮಯ್ಯ!



















