ವಯನಾಡು: ಕೇರಳದ ವಯನಾಡಿನಲ್ಲಿ ಮಳೆಯಿಂದಾಗಿ ಭೂ ಕುಸಿತ ಉಂಟಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 250 ರ ಗಡಿ ದಾಟಿದೆ.
ಅವಶೇಷಗಳ ಅಡಿಯಲ್ಲಿ ಬದುಕುಳಿದವರು ಮತ್ತು ಮೃತದೇಹಗಳಿಗಾಗಿ ಶೋಧ ಇನ್ನೂ ಮುಂದುವರೆದಿದ್ದು, ಈಗ ಅಲ್ಲಿ ಕೆಸರು ಮತ್ತು ಆಕ್ರಂದನವೇ ತುಂಬಿಕೊಂಡಿದೆ. ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದಂತಾಗಿದೆ.
ಇನ್ನೂ ಅಲ್ಲಿ 200ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಂಗಳವಾರ ಮಧ್ಯರಾತ್ರಿ ಸಂಭವಿಸಿದ ದಿಢೀರ್ ಪ್ರವಾಹ ಮತ್ತು ಗುಡ್ಡ ಕುಸಿತಕ್ಕೆ ವಯನಾಡಿನ ಮುಂಡಕ್ಕೈ, ಚೂರಲ್ ಮಾಲಾ, ಅತ್ತಮಾಲಾ, ಮತ್ತು ನೂಲ್ ಪುಳ ಅಕ್ಷರಶಃ ನರಕವಾದಂತಾಗಿವೆ.
ಹೀಗಾಗಿ ರಕ್ಷಣಾ ಕಾರ್ಯ ಮುಂದುವರಿದಿದೆ. ಮಳೆ ಹಾಗೂ ಮುಂಡಕ್ಕೈ ನದಿಯಲ್ಲಿ ಪ್ರವಾಹದ ನೀರಿನ ನಡುವೆಯೇ ಭೂಸೇನೆ, ನೌಕಾಪಡೆ, ಎನ್ ಡಿಆರ್ ಎಫ್, ರಾಜ್ಯ ತುರ್ತು ಸೇವಾ ಪಡೆ, ಸ್ಥಳೀಯ ಜನರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿವೆ. ಬರೋಬ್ಬರಿ 1,167 ಸಿಬ್ಬಂದಿಯ ತಂಡ ರಕ್ಷಣಾ ಕಾರ್ಯ ನಡೆಸುತ್ತಿದೆ. ಸಂತ್ರಸ್ತರಿಗಾಗಿ 82 ಶಿಬಿರಗಳನ್ನು ತೆರೆಯಲಾಗಿದೆ. 8,017 ಜನರಿಗೆ ಈಗಾಗಲೇ ಆಶ್ರಯ ನೀಡಲಾಗಿದೆ. 19 ಗರ್ಭಿಣಿಯರು ಕೂಡ ಇದ್ದಾರೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಇಲ್ಲಿಯವರೆಗೆ 299 ಮಕ್ಕಳು, 559 ಮಹಿಳೆಯರು ಸೇರಿದಂತೆ ಒಟ್ಟು 1,592 ಜನರನ್ನು ರಕ್ಷಿಸಲಾಗಿದೆ. ಸ್ವರ್ಗದಂತಿದ್ದ ವಯನಾಡಿನಲ್ಲಿ ಶೋಕ ಮಡುಗಟ್ಟಿದ್ದು, ಮೃತರ ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರವಾಹ ಮತ್ತು ಮಣ್ಣು ಕುಸಿತದ ರಭಸಕ್ಕೆ ಮೃತದೇಹಗಳು ಹತ್ತಾರು ಕಿಲೋ ಮೀಟರ್ ವರೆಗೂ ಕೊಚ್ಚಿ ಹೋಗಿವೆ. ನೆರೆಯ ಜಿಲ್ಲೆಗಳಲ್ಲಿಯೂ ಮೃತದೇಹಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ.
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದ ಕನ್ನಡಿಗರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಎಲ್ಲೆಂದರಲ್ಲಿ ಒಡೆದು ಚಲ್ಲಾಪಿಲ್ಲಿಯಾಗಿ ಕಲ್ಲು-ಬಂಡೆಗಳು, ಮುರಿದು ಬಿದ್ದ ಮನೆಗಳ ಅವಶೇಷಗಳು, ಮಣ್ಣು-ಕೆಸರಿನ ರಾಶಿ, ಕೆಸರ ರಾಶಿಯೊಂದಿಗೆ ಹರಿಯುವ ನದಿ, ಮಣ್ಣು ಕೊರಕಲಿನಿಂದಾಗಿ ಉಂಟಾದ ದೊಡ್ಡ ಕಣಿವೆಗಳ ಮಧ್ಯೆಯೇ ರಕ್ಷಣಾ ಪಡೆ ಕಾರ್ಯಾಚರಣೆ ನಡೆಸಿದೆ. ಇಡೀ ದೇಶವೇ ಈ ಘಟನೆಗೆ ಮಮ್ಮಲ ಮರಗುತ್ತಿದೆ.