ವಾಷಿಂಗ್ಟನ್: ಅಲಾಸ್ಕಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಮಹತ್ವದ ಸಭೆಯ ಬೆನ್ನಲ್ಲೇ, ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ಪುಟಿನ್ ಅವರಿಗೆ “ಶಾಂತಿಯ ಪತ್ರ” ಬರೆದಿದ್ದಾರೆ. “ವಿಶ್ವದಾದ್ಯಂತ ಮಕ್ಕಳನ್ನು ಮತ್ತು ಮುಂದಿನ ಪೀಳಿಗೆಯನ್ನು ರಕ್ಷಿಸುವ ಸಮಯ ಬಂದಿದೆ” ಎಂದು ಅವರು ಈ ಪತ್ರದಲ್ಲಿ ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ.
ರಷ್ಯಾ-ಉಕ್ರೇನ್ ಸಂಘರ್ಷ ಮುಂದುವರಿದಿರುವಾಗಲೇ, ಅಲಾಸ್ಕಾದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ವ್ಲಾಡಿಮಿರ್ ಪುಟಿನ್ ನಡುವೆ ನಡೆದ ಮಾತುಕತೆಯನ್ನು “ಫಲಪ್ರದ” ಎಂದು ಟ್ರಂಪ್ ಬಣ್ಣಿಸಿದ್ದರು. ಹಲವು ವಿಷಯಗಳ ಬಗ್ಗೆ ಒಮ್ಮತಕ್ಕೆ ಬರಲಾಗಿದೆ. ಕೆಲವೇ ಕೆಲವು ವಿಚಾರಗಳು ಮಾತ್ರ ಬಗೆಹರಿಯಬೇಕಿದೆ ಎಂದು ಅವರು ಹೇಳಿದ್ದು, ಉಕ್ರೇನ್ ಸಂಘರ್ಷಕ್ಕೆ ಪರಿಹಾರ ಸಿಗುವ ಸುಳಿವು ನೀಡಿದ್ದರು. ಈ ಸಭೆ ಆರಂಭವಾಗುವ ಮುನ್ನ, ಅಧ್ಯಕ್ಷ ಟ್ರಂಪ್ ಅವರೇ ಖುದ್ದಾಗಿ ತಮ್ಮ ಪತ್ನಿಯ ಪತ್ರವನ್ನು ಪುಟಿನ್‌ಗೆ ಹಸ್ತಾಂತರಿಸಿದ್ದಾರೆ ಎಂದು ಹೇಳಲಾಗಿದೆ.
ಪತ್ರದಲ್ಲೇನಿದೆ?
ರಷ್ಯಾ ಅಧ್ಯಕ್ಷರನ್ನು ಉದ್ದೇಶಿಸಿ ಬರೆದ ಈ ಹೃದಯಸ್ಪರ್ಶಿ ಪತ್ರವನ್ನು ಮೆಲಾನಿಯಾ ಅವರು ಬಾಲ್ಯದ ಕುರಿತಾದ ಸಾರ್ವತ್ರಿಕ ಚಿಂತನೆಯೊಂದಿಗೆ ಆರಂಭಿಸಿದ್ದಾರೆ.
“ಪ್ರೀತಿಯ ಅಧ್ಯಕ್ಷ ಪುಟಿನ್,” ಎಂದು ಪತ್ರ ಆರಂಭವಾಗುತ್ತದೆ. “ಪ್ರತಿ ಮಗುವಿನ ಹೃದಯದಲ್ಲೂ ಕನಸುಗಳಿರುತ್ತವೆ; ಅದು ಹಳ್ಳಿಯಲ್ಲೇ ಹುಟ್ಟಿರಲಿ ಅಥವಾ ಭವ್ಯ ನಗರದಲ್ಲೇ ಹುಟ್ಟಿರಲಿ. ಎಲ್ಲ ಮಕ್ಕಳೂ ಪ್ರೀತಿ, ವಾತ್ಸಲ್ಯ, ಹೊಸ ಸಾಧ್ಯತೆಗಳು ಮತ್ತು ಅಪಾಯದಿಂದ ಸುರಕ್ಷತೆಯನ್ನು ಬಯಸುತ್ತಾರೆ.

ಮುಂದಿನ ಪೀಳಿಗೆಯನ್ನು ರಕ್ಷಿಸುವುದು ಪೋಷಕರು ಮತ್ತು ವಿಶ್ವ ನಾಯಕರ ಸಮಾನ ಜವಾಬ್ದಾರಿಯಾಗಿದೆ. ಪೋಷಕರಾಗಿ, ಮುಂದಿನ ಪೀಳಿಗೆಯ ಭರವಸೆಯನ್ನು ಪೋಷಿಸುವುದು ನಮ್ಮ ಕರ್ತವ್ಯ. ನಾಯಕರಾಗಿ, ನಮ್ಮ ಮಕ್ಕಳನ್ನು ಪೋಷಿಸುವ ಜವಾಬ್ದಾರಿಯು ಕೆಲವರಿಗಷ್ಟೇ ಸೀಮಿತವಾಗಿಲ್ಲ, ಅದು ನಮ್ಮೆಲ್ಲರ ಹೊಣೆ” ಎಂದು ಪತ್ರದಲ್ಲಿ ಮೆಲಾನಿಯಾ ಟ್ರಂಪ್ ಬರೆದಿದ್ದಾರೆ.
ವಿಶ್ವದಾದ್ಯಂತ ಶಾಂತಿ ಮತ್ತು ಗೌರವಯುತ ವಾತಾವರಣ ನಿರ್ಮಿಸುವ ಅಗತ್ಯವನ್ನು ಪತ್ರದಲ್ಲಿ ಒತ್ತಿಹೇಳಲಾಗಿದೆ. “ನಿಸ್ಸಂದೇಹವಾಗಿ, ನಾವು ಎಲ್ಲರಿಗೂ ಗೌರವದಿಂದ ಕೂಡಿದ ಜಗತ್ತನ್ನು ನಿರ್ಮಿಸಲು ಶ್ರಮಿಸಬೇಕು. ಆಗ ಪ್ರತಿಯೊಬ್ಬ ಜೀವಿಗೂ ಶಾಂತಿಯುತ ಬದುಕು ಸಾಧ್ಯವಾಗುತ್ತದೆ ಮತ್ತು ಭವಿಷ್ಯವು ಸಂಪೂರ್ಣವಾಗಿ ರಕ್ಷಿಸಲ್ಪಡುತ್ತದೆ” ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಮತ್ತು ಭೌಗೋಳಿಕ ಗಡಿಗಳನ್ನು ಮೀರಿದ ಮಕ್ಕಳ ಮುಗ್ಧತೆಯನ್ನು ನೆನಪಿಸುತ್ತಾ ಅವರು ಪತ್ರವನ್ನು ಮುಕ್ತಾಯಗೊಳಿಸಿದ್ದಾರೆ. “ಅಧ್ಯಕ್ಷ ಪುಟಿನ್ ಅವರೇ, ಪ್ರತಿ ಪೀಳಿಗೆಯ ಕುಡಿಗಳು ತಮ್ಮ ಜೀವನವನ್ನು ಪರಿಶುದ್ಧತೆಯಿಂದ ಆರಂಭಿಸುತ್ತಾರೆ ಎಂಬುದು ಸರಳವಾದರೂ ಆಳವಾದ ಪರಿಕಲ್ಪನೆ. ಈ ಮುಗ್ಧತೆಯು ಭೌಗೋಳಿಕತೆ, ಸರ್ಕಾರ ಮತ್ತು ಸಿದ್ಧಾಂತಗಳನ್ನು ಮೀರಿದ್ದಾಗಿದೆ ಎಂಬುದನ್ನು ನೀವು ಒಪ್ಪುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದು ಮೆಲಾನಿಯಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.