ಬೆಂಗಳೂರಿನಲ್ಲಿ ಮತ್ತೆ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಅಮಾಯಕರ ಮೇಲೆ ಹಲ್ಲೆ ನಡೆಸಿರುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಸಿಲಿಕಾನ್ ಸಿಟಿಯ ಸಂಜಯನಗರದ(sanjay nagar) ಭೂಪಸಂದ್ರದಲ್ಲಿರುವ ಬೇಕರಿಯೊಂದರಲ್ಲಿ ಈ ನಡೆದಿದೆ. ಬುಧವಾರ ರಾತ್ರಿ 8.30ರ ಸುಮಾರಿಗೆ ನಾಲ್ವರು ಪುಡಿ ರೌಡಿಗಳು ಕ್ಷುಲ್ಲಕ ಕಾರಣಕ್ಕೆ ಬೇಕರಿಯೊಳಗೆ ನುಗ್ಗಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಬೇಕರಿಯಲ್ಲಿದ್ದ ಬಾಟಲ್ ತೆಗೆದುಕೊಂಡು ಹಲ್ಲೆ ಮಾಡಿದ್ದಾರೆ. ಕೊಳ್ಳೇಗಾಲ ಮೂಲದ ಅಶೋಕ್ (Ashok)ಎಂಬ ಯುವಕನ ಮೇಲೆ ಹಲ್ಲೆ ನಡೆದಿದೆ. ಯುವಕ ಕಾಲೇಜಿನಲ್ಲಿ ಓದುತ್ತ ಈ ಬೇಕರಿಯಲ್ಲಿ ಕೆಲಸಕ್ಕೆಂದು ಸೇರಿಕೊಂಡಿದ್ದ. ಬೇಕರಿಯನ್ನು ಮಹಿಳೆಯೋರ್ವರು ನಡೆಸುತ್ತಿದ್ದಾರೆ.
ಪುಡಿ ರೌಡಿಗಳ ದಾಂಧಲೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ಸಂಜಯನಗರ ಪೊಲೀಸರು (Police)ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ದಾಂಧಲೆ ಮಾಡಿರುವ ವ್ಯಕ್ತಿಗಳು ಸ್ಥಳೀಯರಾಗಿರುವ ಹಿನ್ನೆಲೆಯಲ್ಲಿ ಬೇಕರಿ ಮಾಲೀಕರು ದೂರು ಸಲ್ಲಿಸಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ.
ಇಂದು (ಗುರುವಾರ) ಬೆಳಗ್ಗೆ ಘಟನಾ ಸ್ಥಳಕ್ಕೆ ರಕ್ಷಣಾ ವೇದಿಕೆ(Rakshana Vedike) ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ(Praveenkumar Shetty) ಹಾಗೂ ಸಂಘಟನೆಯ ಸದಸ್ಯರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಸುಖಾಸುಮ್ಮನೆ ಪುಡಿ ರೌಡಿಗಳು ಬೇಕರಿ (Bakery)ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸರು ಈಗಲೇ ಪುಡಿರೌಡಿಗಳ ಬಾಲ ಕಟ್ ಮಾಡಬೇಕು. ಇಲ್ಲವಾದರೆ, ಇಂತಹ ರೌಡಿಗಳಿಂದ ಅಮಾಯಕರು ಬಲಿಯಾಗಬಹುದು. ಪುಡಿರೌಡಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರವೀಣ್ ಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.